ಶಿವಮೊಗ್ಗ : ನಗರದಲ್ಲಿ ಕೆಲವೆಡೆ ಗಾಂಜಾಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಬದುಕುವುದೇ ದುಸ್ತರವಾಗಿದೆ. ನಗರದ ಆರ್.ಎಂ.ಎಲ್. ನಗರ, ಮಾರ್ನವಮಿಬೈಲಿನಲ್ಲಿ ಜನಸಾಮಾನ್ಯರ ಮೇಲೆ ಹಲ್ಲೆ ಹಾಗೂ ದರೋಡೆ ನಡೆಯುತ್ತಿದ್ದು, ಪೊಲೀಸ್ ವ್ಯವಸ್ಥೆ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿ ಖುದ್ದು ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ಸ್ಥಳೀಯರು ಸೇರಿ, ದೊಡ್ಡಪೇಟೆ ಠಾಣೆಗೆ ದೂರು ನೀಡಿದರು.
ಸ್ಥಳೀಯರ ಪ್ರಕಾರ ಪುಂಡರ ಗುಂಪೊಂದು ರಾತ್ರಿವೇಳೆಗೆ ಬೇಕೆಂದೆ ವಾಹನ ಸವಾರರನ್ನು ಅಡ್ಡಗಟ್ಟುವುದು, ಅವಾಚ್ಯ ನಿಂದನೆ ಮಾಡುವುದು, ಗಾಡಿ ಅಡ್ಡಹಾಕಿ ಬೆದರಿಕೆಯೊಡ್ಡಿ ದರೋಡೆ ಮಾಡುವುದು, ಸ್ಥಳೀಯ ಅಂಗಡಿಗಳಲ್ಲಿ ಪದಾರ್ಥಗಳನ್ನು ಪಡೆದು, ಹಣ ನೀಡದೆ ದೂರು ನೀಡಿದರೆ ಹಲ್ಲೆಯ ಬೆದರಿಕೆ ಹಾಕುತ್ತಿದ್ದಾರೆ. ಇದು ಕಳೆದ ಐದಾರು ತಿಂಗಳಿನಿಂದ ನಡೆಯುತ್ತಾ ಬಂದಿದ್ದು, ಪ್ರಾಣ ಬೆದರಿಕೆಯಿಂದ ಸಾರ್ವಜನಿಕರು ದೂರು ನೀಡಲು ಬಯಪಡುತ್ತಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.

ಶನಿವಾರ ಸಂಜೆ ಹರೀಶ್ ಎಂಬ ಆರ್ಎಂಎಲ್ ನಗರದ ನಿವಾಸಿ ಮೇಲೆ ಹಲ್ಲೆ ನಡೆಸಿ, 22,000 ರೂ.ಗಳನ್ನು ಕಿತ್ತುಕೊಂಡಿದ್ದಾರೆ. ಹಲ್ಲೆಯಿಂದಾಗಿ ಕೈ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಸಹ ಈಗಲೂ ಕೈಗೆ ಬ್ಯಾಂಡೇಜ್ ಹಾಕಿದ್ದರೂ ಕೂಡ ಎಂಎಲ್ಸಿ ಕೇಸ್ ದಾಖಲಾಗಿಲ್ಲ. ಈ ರೀತಿ ಮಾಜಿ ಯೋಧ ಶ್ರೀನಿವಾಸ್ ಎಂಬುವವರಿಗೆ ಕೂಡ ಅಡ್ಡಹಾಕಿ ದರೋಡೆ ಪ್ರಯತ್ನ ಮಾಡಲಾಗಿದೆ. ಇಂದು ಸ್ಥಳೀಯರೆಲ್ಲರೂ ಒಟ್ಟಾಗಿ ಶಾಸಕರ ಗಮನಕ್ಕೆ ತಂದಾಗ ಅವರೇ ಖುದ್ಧಾಗಿ ದೊಡ್ಡಪೇಟ ಠಾಣೆಗೆ ಆಗಮಿಸಿ ಇನ್ಸ್ಪೆಕ್ಟರ್ ರವಿಪಾಟೀಲ್ ಜೊತೆಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗೂ ಪೊಲೀಸ್ ವೈಫಲ್ಯದ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬಸ್ ನಿಲ್ದಾಣದಲ್ಲಿ ಬಸ್ಸಿನೊಳಗೆ ನುಗ್ಗಿ ಹೊಡೆಯುತ್ತಾರೆ. ದೂರು ನೀಡಿದರೆ ಅಂತಹವರ ಮನೆಯ ಮುಂಭಾಗ ಬಂದು ಅವಾಚ್ಯ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ ಕಿಟಕಿಯ ಗಾಜುಗಳನ್ನು ಒಡೆದು, ಪಾಟ್ಗಳನ್ನು ಪುಡಿ ಮಾಡಿದ್ದಾರೆ. ಹೀಗಾಗಿ ಜನ ಭಯಪಡುತ್ತಿದ್ದಾರೆ ಸಾರ್ವಜನಿಕರ ಮೇಲೆ ಹಲ್ಲೆ ಆದಾಗ ದೂರು ಕೊಡಲು ಶಾಸಕರೇ ಬರಬೇಕಾ ? ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂಬುದು ಎಂದು ಶಾಸಕರ ಪ್ರಶ್ನಿಸಿದರು.
ನಾನು ಗೃಹಸಚಿವ ಪರಮೇಶ್ವರ್ ಅವರಿಗೆ 100ಸಲ ಮನವಿ ಮಾಡಿದ್ದೇನೆ. ಲಿಖಿತ ರೂಪದಲ್ಲಿ ದೂರು ನೀಡಿದ್ದೇನೆ. ನಗರದ ಬಾಪೂಜಿನಗರ, ಮಾರ್ನವಮಿಬೈಲು, ಹೊಸಮನೆ, ಆರ್ಎಂಎಲ್ ನಗರದಲ್ಲಿ ಹಿಂದೂಗಳು ಬದುಕುವುದೇ ಕಷ್ಟವಾಗಿದೆ. ಅನೇಕರು ಮನೆ ಮಾರಾಟಮಾಡಿ ಬೇರೆಡೆಗೆ ಹೋಗಿದ್ದಾರೆ. ದಯವಿಟ್ಟು ಪೊಲೀಸ್ ಹಿರಿಯ ಅಧಿಕಾರಿಗಳು ಆ ಜಾಗಕ್ಕೆ ನಮ್ಮ ಜೊತೆಗೆ ಬಂದು ಸ್ಥಳೀಯರ ಅಹವಾಲು ಏನೆಂಬುದನ್ನು ಮೊದಲು ಕೇಳಲಿ ಎಂದರು.

ಪೊಲೀಸ್ ಅಧಿಕಾರಿಗಳ ಪ್ರಕಾರ ಜನಸಾಮಾನ್ಯರು ದೂರು ಕೊಟ್ಟಾಗ ಮಾತ್ರ ನಾವು ಕ್ರಮ ತೆಗೆದುಕೊಳ್ಳಲು ಸಾಧ್ಯ. ಸುಮ್ಮನೆ ನಾವು ಯಾರನ್ನೂ ಕರೆದುಕೊಂಡು ಬರುವ ಹಾಗಿಲ್ಲ. ನ್ಯಾಯಾಲಯದಲ್ಲಿ ಪೊಲೀಸರ ಮೇಲೆಯೇ ಕ್ರಮವಾಗುತ್ತದೆ. ಧೈರ್ಯಮಾಡಿ ಸಾರ್ವಜನಿಕರು ದೂರು ಕೊಟ್ಟಲ್ಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂಬುದು ಅವರ ವಾದ.

ಈ ಬಗ್ಗೆ ಇಂದು ಹರೀಶ್ ಮತ್ತು ಕೆಲವರು ಅಧಿಕೃತವಾಗಿ ದೂರು ನೀಡಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ವಿನಂತಿ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಅನೇಕ ಪ್ರಕರಣಗಳು ನಡೆದಿರುವುದು ನಿಜ ಎನ್ನುವುದಕ್ಕೆ ಸಾರ್ವಜನಿಕರ ಬಳಿ ವೀಡಿಯೋ ಪುಟೇಜ್ ಇದ್ದು, ಅದರ ಮೂಲಕ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮತ್ತು ಶಾಸಕರ ಒತ್ತಾಯವಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಕೆ.ವಿ. ಅಣ್ಣಪ್ಪ, ಮಾಜಿ ಕಾರ್ಪೋರೇಟರ್ ಪ್ರಭಾಕರ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.