ಶಿವಮೊಗ್ಗ : ಇಂದು ನಗರದ ನವುಲೆಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯಾವಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅಧಿಕೃತವಾಗಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಮಹತ್ವ ಪಡೆದಿದ್ದು, ಕ್ರೀಡಾಪ್ರೇಮಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಪ್ರಸಿದ್ಧ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೂಡ ಪ್ರತಿಭಾವಂತ ಕ್ರಿಕೆಟ್ ಆಟಗಾರರಿದ್ದು ಅವರಿಗೆ ಈ ಪಂದ್ಯಾವಳಿ ಪ್ರೋತ್ಸಾಹ ನೀಡಲಿ ಮತ್ತು ಈ ಪಂದ್ಯಾವಳಿಯ ಎರಡೂ ತಂಡಗಳ ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಿ.ಎಸ್. ಅರುಣ್, ಡಾ|| ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸೂಡಾ ಆಯುಕ್ತ ವಿಶ್ವನಾಥ್, ತೋಟಗಾರಿಕಾ ಮತ್ತು ಕೃಷಿ ವಿವಿ ಕುಲಪತಿ ಜಗದೀಶ್, ಕೆಎಸ್ಸಿಎ ವಲಯ ಸಂಚಾಲಕ ಹೆಚ್.ಎಸ್. ಸದಾನಂದ್, ಪ್ರಮುಖರಾದ ರಾಜೇಂದ್ರ ಕಾಮತ್, ಡಿ.ಆರ್. ನಾಗರಾಜ್, ಐಡಿಯಲ್ ಗೋಪಿ, ಎಸ್.ಪಿ. ಶೇಷಾದ್ರಿ, ವೈ.ಹೆಚ್. ನಾಗರಾಜ್ ಮತ್ತಿತರರಿದ್ದರು.