ಶಿವಮೊಗ್ಗ : ನಗರದಲ್ಲಿ ಆನ್ಲೈನ್ ಡೆಲಿವರಿ ಬಾಯ್ಸ್ಗಳ ಮೇಲೆ ಪದೇ ಪದೇ ಹಲ್ಲೆಯಾಗುತ್ತಿದ್ದು, ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಬ್ಲಿಂಕಿಟ್ ಸಂಸ್ಥೆಯ ಸಿಬ್ಬಂದಿಗಳು ಆರೋಪಿಸಿ ತಮ್ಮ ಕಛೇರಿಯ ಮುಂದೆ ಆತಂಕ ವ್ಯಕ್ತಪಡಿಸಿ ಡೆಲಿವರಿ ಮಾಡದೆ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಲವು ಡೆಲಿವರಿ ಬಾಯ್ಸ್ಗಳು ಮಾತನಾಡಿ, ನಾವು ಅತ್ಯಂತ ಬಡಕುಟುಂಬದಿಂದ ಬಂದವರಾಗಿದ್ದು, ಮನೆಯ ನಿರ್ವಹಣೆಗಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ. ರಾತ್ರಿ-ಹಗಲು ಎನ್ನದೆ ದುಡಿಯುತ್ತಿದ್ದೇವೆ. ಅನೇಕ ಕಡೆ 5ನೇ, 6ನೇ ಮಹಡಿಗೆ ಮೆಟ್ಟಿಲು ಹತ್ತಿ ಹೋಗಿ ಗ್ರಾಹಕರ ಬೇಡಿಕೆಯನ್ನು ಮನೆ ಬಾಗಿಲಿಗೆ ನೀಡುತ್ತೇವೆ. ಹೊಟ್ಟೆಪಾಡಿಗಾಗಿ ಜೀವದ ಹಂಗು ತೊರೆದು ಹಬ್ಬ-ಹರಿದಿನಗಳಲ್ಲೂ ಕೆಲಸ ಮಾಡುತ್ತೇವೆ. ಆದರೆ ಇತ್ತೀಚೆಗೆ ನಗರದ ಕೆಲವು ಏರಿಯಾಗಳಲ್ಲಿ ಭಯದ ವಾತಾವರಣ ಇದೆ. ಕೆಲವು ಗಾಂಜಾ ನಶೆಯಲ್ಲಿರುವ ಯುವಕರು ಮತ್ತು ಕುಡಿತದ ಚಟಕ್ಕೆ ಬಲಿಯಾದ ಯುವಕರು ನಕಲಿ ವಿಳಾಸಗಳನ್ನು ನೀಡಿ, ಬೆಲೆಬಾಳುವ ಸಿಗರೇಟು, ಸ್ನ್ಯಾಕ್ಸ್ ಮತ್ತು ಡ್ರಿಂಕ್ಸ್ಗಳನ್ನು ತರಿಸಿಕೊಂಡು ಸಾವಿರಾರು ರೂ. ಬಿಲ್ಲನ್ನು ನೀಡದೆ ಲಾಂಗ್, ಮಚ್ಚುಗಳನ್ನು ತೋರಿಸಿ, ಹಲ್ಲೆಮಾಡಿ ಕಳುಹಿಸುತ್ತಾರೆ. ಫೋನ್ ಪೇ ಮಾಡಿದ್ದೇವೆ ಎಂದು ಹೇಳುತ್ತಾ ಮೋಬೈಲ್ ತೋರಿಸಿ ನಮ್ಮನ್ನು ಕಳುಹಿಸುತ್ತಾರೆ. ಆದರ ನಮ್ಮ ಖಾತೆಗೆ ಆ ಹಣ ಬಂದಿರುವುದಿಲ್ಲ. ಈ ರೀತಿ ನಮ್ಮ ಸಂಸ್ಥೆಯ ಅನೇಕ ಸಿಬ್ಬಂದಿಗಳಿಗೆ ಕೆಟ್ಟ ಅನುಭವವಾಗಿದೆ. ಕೆಲವರು ಹೊಡೆತ ತಿಂದು ಬಂದು ತಮ್ಮ ಕೈಯಿಂದ ಕಂಪನಿಗೆ ದುಡ್ಡು ಕೊಟ್ಟಿದ್ದಾರೆ. ಕೆಲವು ಆರ್ಡರ್ಗಳನ್ನು ನಾವೇ ಕ್ಯಾನ್ಸಲ್ ಮಾಡಿಕೊಂಡಿದ್ದೇವೆ. ಕೆಲವು ಸಿಬ್ಬಂದಿಗಳು ಕೆಲಸವನ್ನೇ ಬಿಟ್ಟಿದ್ದಾರೆ.

ಬಂದ ಆದಾಯದಲ್ಲಿ ಶಿಕ್ಷಣವನ್ನು ಮುಂದುವರಿಸಿಕೊಂಡು ಪಾರ್ಟ್ಟೈಂ ಕೆಲಸ ಮಾಡುವವರು ಇದ್ದಾರೆ. ಈ ಬಗ್ಗೆ ತುಂಗಾನಗರ ಮತ್ತು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದೇವೆ. ಕೆಲವು ಪೊಲೀಸರು ಅರ್ಧಗಂಟೆ ಬಳಿಕ ಬಂದು ನೀವ್ಯಾಕೆ ಅಂತಹ ಜಾಗಗಳಿಗೆ ಹೋಗುತ್ತೀರಿ ಎಂದು ನಮಗೇ ಬುದ್ಧಿವಾದ ಹೇಳಿದ್ದಾರೆ. ಸರಿಯಾದ ಕ್ರಮ ಕೈಗೊಂಡಿಲ್ಲ. ನಗರದ ಆರ್ಎಂಎಲ್ ನಗರ, ಸೂಳೆಬೈಲು, ಟಿಪ್ಪುನಗರ, ತುಂಗಾನಗರ, ಅನುಪಿನಕಟ್ಟೆ, ಗೋಪಾಲಗೌಡ ಬಡಾವಣೆಯ ಕೊನೆಯ ಹಂತ, ಮಂಡ್ಲಿ ಇನ್ನೂ ಮೊದಲಾದ ಕಡೆ ಅನೇಕ ಪ್ರಕರಣಗಳು ನಡೆದಿದೆ. ಕಂಪನಿಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಅವರು ಕೂಡ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಈಗ ದೀಪಾವಳಿಯ ಸಮಯವಾಗಿರುವುದರಿಂದ ಹೆಚ್ಚಿನ ಬೇಡಿಕೆಗಳು ಗ್ರಾಹಕರಿಂದ ಬರುತ್ತಿದ್ದು, ನಮಗೆ ಡೆಲಿವರಿ ಮಾಡಲು ಆತಂಕವಾಗಿದೆ. ಕೂಡಲೇ ಪೊಲೀಸರು ಹೊಟ್ಟೆಪಾಡಿಗಾಗಿ ದುಡಿಯುವ ಪದವಿಧರ ನಿರುದ್ಯೋಗಿ ಯುವಕರಿಗೆ ಬೆಂಗಾವಲಾಗಿ ನಿಲ್ಲಬೇಕು. ನಮಗೆ ಸೂಕ್ತ ಭದ್ರತೆ ಒದಗಿಸಿ ದೂರು ನೀಡಿದಾಗ ತಕ್ಷಣ ಸ್ಪಂಧಿಸಬೇಕು ಎಂದು ಮನವಿ ಮಾಡಿದರು.
ನಗರದ ಅನೇಕ ಕಡೆ ಗಾಂಜಾ ಸೇವಿಸುವ ಯುವಕರು ಈ ಕೃತ್ಯಗಳನ್ನು ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕೆಂದು ಬ್ಲಿಂಕಿಟ್, ಜೋಮೇಟೋ ಸಂಸ್ಥೆಯ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.