ಶಿವಮೊಗ್ಗ: ಪಕ್ಷಕ್ಕೆ ಮುಜುಗರ ತರುವುದಾದರೆ ರಾಜೀನಾಮೆ ನೀಡುವೆ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಮಾಧ್ಯಮಗಳಲ್ಲಿ ಬಂದಿರುವ ವಿಡಿಯೋಗಳ ಕುರಿತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಗಳು ನನಗೆ ಫೋನ್ ಮಾಡಿದ್ದು ನಿಜ. ಟಿವಿಗಳಲ್ಲಿ ನಿಮ್ಮ ಬಗ್ಗೆ ಪ್ರಸಾರವಾಗುತ್ತಿದೆ ಎಂದು ಕೇಳಿದರು. ನಾನು ಅವರಿಗೆ ಹೇಳಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದೇನೆ. ಅವರು ನನಗೆ ರಾಜೀನಾಮೆ ಕೊಡು ಎಂದು ಹೇಳಿಲ್ಲ. ಆದರೆ ಕೊಡಬೇಕು ಎಂದು ಅವರು ಹೇಳಿದರೆ ಕೊಡುವೆ. ಪಕ್ಷಕ್ಕೆ ಮುಜುಗರ ತರುತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದರು.

ನನ್ನ ಮೇಲೆ ಬಂದಿರುವ ಆರೋಪ ಸಂಪೂರ್ಣ ಷಡ್ಯಂತ್ರದಿಂದ ಕೂಡಿದೆ. ನಿಗಮದ ಸೌಲಭ್ಯ ನೀಡಲು ಕಮಿಷನ್ ಕೇಳಿದ್ದೇನೆ ಎನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜವಾದರೂ ಮಾತನಾಡಿದ್ದು ನಾನಲ್ಲ. ಆ ಧ್ವನಿ ನನ್ನದೂ ಅಲ್ಲ. ಇಡೀ ಸಂಭಾಷಣೆಗೆ ಬೇರೆ ಧ್ವನಿ ನೀಡಲಾಗಿದೆ. ಇದಕ್ಕಾಗಿ ಎಐ(ಕೃತಕ ಬುದ್ಧಿಮತ್ತೆ) ಬಳಸಿ ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಬೇಕಾದರೆ ಇದನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸಬಹುದು ಎಂದರು.

ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ದಲಿತ ವಿರೋಧಿಗಳು, ಶೋಷಿತ ಸಮುದಾಯದ ವಿರೋಧಿಗಳು ಕೆಲಸ ಮಾಡಿವೆ. ಆ ಕಾರಣದಿಂದಲೇ ನಾನು ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸಿದ್ದೇನೆ. ಅಧ್ಯಕ್ಷನಾಗಿ ಬಂದ ಮೇಲೆ ನಿಗಮಕ್ಕೆ ಶಿಸ್ತು ತಂದಿದ್ದೇನೆ. ಎಲ್ಲ ವ್ಯವಸ್ಥೆಗಳು ಆನ್ ಲೈನ್ ಮೂಲಕವೇ ನಡೆಯುತ್ತವೆ. ಇಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಬರುವುದಿಲ್ಲ. ನನ್ನ ಮೇಲಿನ ಆರೋಪ ಶುದ್ಧ ಸುಳ್ಳು. ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿ ಅದಕ್ಕೆ ಇನ್ನೊಬ್ಬರ ಧ್ವನಿ ಸೇರಿಸಿ ಕಮಿಷನ್ ಕೇಳಿದೆ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಾಗಾಗಿ ನನ್ನ ವಿರುದ್ಧದ ಷಡ್ಯಂತ್ರದ ವಿಡಿಯೋ ತಿರುಚಿದವರ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆ. ಸೂಕ್ತ ತನಿಖೆಗೂ ಒತ್ತಾಯಿಸುವೆ. ರಾಜೀನಾಮೆ ಪ್ರಶ್ನೆ ಸರ್ಕಾರದ ನಿರ್ಧಾರ. ಇದಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ, ಇಲಾಖೆ ಸಚಿವರನ್ನು ನಾನು ಭೇಟಿ ಮಾಡಬೇಕು. ನಿಜವಾಗಿ ನಡೆದಿರುವುದು ಏನೆಂದು ತಿಳಿಸಬೇಕಾಗಿದೆ. ಮುಂದೆ ಅವರು ನೀಡುವ ಸೂಚನೆಗೆ ನಾನು ಬದ್ಧನಾಗಿದ್ದೇನೆ. ರಾಜೀನಾಮೆ ನೀಡಬೇಕು ಎಂದರೆ ಖಂಡಿತ ನೀಡುವೆ. ಅದಕ್ಕೂ ನಾನು ಇಡೀ ಪ್ರಕರಣವನ್ನು ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೀರೇಶ್ ಕ್ಯಾತಿನಕೊಪ್ಪ, ಮನ್ಸೂರ್, ಕೃಷ್ಣಪ್ಪ, ತಿಮ್ಮರಾಜು, ದೇವಿಕುಮಾರ್, ಪಿ.ಒ. ಶಿವಕುಮಾರ್ ಇದ್ದರು.