ಹೊಳೆಹೊನ್ನೂರು: ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರ 2 ಪಾದಗಳು ಅರ್ಧಕ್ಕೆ ಮುರಿದ ಘಟನೆ ಯಡೇಹಳ್ಳಿ ಮತ್ತು ಕೈಮರ ಗ್ರಾಮಗಳ ಮಧ್ಯೆ ಕೈಮರ ಸರ್ಕಲ್ನಲ್ಲಿ ನಡೆದಿದೆ.
ಗಾಯಗೊಂಡವರನ್ನು ತಿಪ್ಪೇರುದ್ರಸ್ವಾಮಿ ಎಂದು ಗರುತಿಸಲಾಗಿದೆ.
ಸಮೀಪದ ಕೈಮರ ಯಡೇಹಳ್ಳಿ ರಸ್ತೆಯಲ್ಲಿ ರಸ್ತೆ ದಾಟುವಾಗ ಈ ಘಟನೆ ಸಂಭವಿಸಿದೆ.
ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಿಪ್ಪೇರುದ್ರ ಸ್ವಾಮಿ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿಪ್ಪೇರುದ್ರ ಸ್ವಾಮಿ ಅವರು ಕೈಮರ ಸರ್ಕಲ್ನಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಮೂತ್ರ ವಿಸರ್ಜನೆಗೆಂದು ರಸ್ತೆ ದಾಟಿ ಹೋಗಿದ್ದರು. ಟೀ ಅಂಗಡಿ ಬಳಿ ಮರಳಿ ಬರುವಾಗ ಶಿವಮೊಗ್ಗದಿಂದ ಚನ್ನಗಿರಿ ಕಡೆಗೆ ತೆರಳುತ್ತಿದ್ದ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆಯ ಪರಿಣಾಮ ತಿಪ್ಪೇರುದ್ರಸ್ವಾಮಿ ಅವರ ಎರಡೂ ಕಾಲಿನ ಪಾದಗಳು ಅರ್ಧಕ್ಕೆ ತುಂಡಾಗಿವೆ. ಬಲಗಣ್ಣಿನ ಹುಬ್ಬಿನ ಬಳಿ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕತ್ತಲಾಗಿದ್ದರಿಂದ ವಾಹನದ ಗುರುತು ಗೊತ್ತಾಗಿಲ್ಲ ಎನ್ನಲಾಗಿದೆ.
ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.