ಶಿವಮೊಗ್ಗ: ನಗರದ ಖ್ಯಾತ ಸಾಂಸ್ಕೃತಿಕ ಸಂಸ್ಥೆ ಶ್ರೀಗಂಧ ವತಿಯಿಂದ ಇದೇ ಜೂನ್ 10 ಮತ್ತು 11ರಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರೂ, ಮಾಜಿ ಉಪಮುಖ್ಯಮಂತ್ರಿಗಳೂ ಆದ ಶ್ರೀ ಕೆ.ಎಸ್. ಈಶ್ವರಪ್ಪನವರ 77ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜೂನ್ 10ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಹಸ್ರ ಚಂಡಿಕಾ ಯಾಗ, ಮಹಾರುದ್ರ ಹೋಮಗಳು ನಡೆಯಲಿವೆ.
11 ಗಂಟೆಗೆ ಪೂರ್ಣಾಹುತಿ ಇರುತ್ತದೆ.
ಇದೇ ವೇಳೆ ಧರ್ಮಸಭೆ ನಡೆಯಲಿದ್ದು ಶ್ರೀಯುತ ಕೆ.ಎಸ್. ಈಶ್ವರಪ್ಪನವರು ಅಧ್ಯಕ್ಷತೆ ವಹಿಸುವರು.

ದಿವ್ಯ ಸಾನ್ನಿಧ್ಯವನ್ನು ಪರಮಪೂಜ್ಯ ಸ್ವಾಮೀಜಿಗಳಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕೂಡ್ಲಿ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಹೊಸದುರ್ಗ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಹಾಗೂ ಶಿವಮೊಗ್ಗ ಆದಿಚುಂಚನಗಿರಿ ಮಠದ ಶ್ರೀ ಸಾಯಿನಾಥ ಸ್ವಾಮಿಗಳು ವಹಿಸಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಮಂಗಳ ನಿಧಿ ಸಮರ್ಪಣಾ ಕಾರ್ಯಕ್ರಮ ಸಹ ಇರುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು. ರಾಮಣ್ಣ ಇವರು ಈ ವೇಳೆ ಉಪಸ್ಥಿತರಿದ್ದು ಮಾತನಾಡುವರು.
ಅದೇ ದಿನ ಸಂಜೆ 6 ಗಂಟೆಗೆ ಸ್ವಾಭಿಮಾನಿ ಭಾರತ ಎಂಬ ವಿಷಯವಾಗಿ ವಿಶೇಷ ದಿಕ್ಸೂಚಿ ಭಾಷಣ ಕಾರ್ಯಕ್ರಮವಿದ್ದು ಖ್ಯಾತ ವಾಗ್ಮಿಗಳು ಹಾಗೂ ಚಿಂತಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿ ಮಗ ಶ್ರೀ ಶೈಲೇಶ್ ತಿಲಕ್ ಆಗಮಿಸುವರು .
ಕೆ.ಎಸ್. ಈಶ್ವರಪ್ಪನವರು ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮಕ್ಕೆ ಮುಂಚೆ ಖ್ಯಾತ ಸಂಗೀತಜ್ಞರಾದ ಶ್ರೀ ಪ್ರಹ್ಲಾದ ದೀಕ್ಷಿತ್, ಶ್ರೀ ಗುರುಗುಹ ನಾಗರಾಜ್ ಹಾಗೂ ಶ್ರೀ ಅರುಣ ಇವರ ತಂಡದವರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಇರುತ್ತದೆ.

ಜೂನ್ 11ರ ಬುಧವಾರ ಸಂಜೆ 6 ಗಂಟೆಗೆ 2024-25ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 1500 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ನಿಧಿ ನೀಡಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪನವರು ವಹಿಸಲಿದ್ದು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಲು ಮಹಾರಾಷ್ಟ್ರ ಕೊಲ್ಲಾಪುರದ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹಾಗೂ ಕವಲಗುಡ್ಡ ಗುರುಪೀಠದ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಮೂಡಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಈ ಎಲ್ಲಾ ಕಾರ್ಯಕ್ರಮಗಳೂ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿಯೇ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸದಭಿರುಚಿಯ ನಾಗರಿಕರನ್ನು ಶ್ರೀಗಂಧ ಸಂಸ್ಥೆ ಆತ್ಮೀಯವಾಗಿ ಆಹ್ವಾನಿಸಿದೆ.