ಸಾಗರ : ತೆರವುಗೊಳಿಸಿದ್ದಾಗ್ಯೂ ಮತ್ತೆಮತ್ತೆ ಒತ್ತುವರಿ ಮಾಡುವವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪದೇಪದೇ ಒತ್ತುವರಿ ಮಾಡುವುದು ಕಣ್ತಪ್ಪಿನಿಂದ ಆಗಿದ್ದಲ್ಲ. ಉದ್ದೇಶಪೂರ್ವಕವಾಗಿಯೆ ಕೆಲವರು ಒತ್ತುವರಿ ಮಾಡುತ್ತಾರೆ. ಅವರ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಭೂಒತುವರಿ ತೆರವು ಮಾಡಲು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಕಂದಾಯ, ಪೊಲೀಸ್, ಅರಣ್ಯ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ಫೋರ್ಸ್ ರಚನೆ ಮಾಡಲು ಉದ್ದೇಶಿಸಲಾಗಿದೆ. ಸೊರಬ ರಸ್ತೆ ಅಗಲೀಕರಣಕ್ಕೆ ಸ್ಥಳೀಯರು ಸಹಕಾರ ನೀಡಬೇಕು. ಈಗಾಗಲೆ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಲಾಗಿದೆ. ಮುಂದಿನ ಎರಡೂವರೆ ತಿಂಗಳಿನಲ್ಲಿ ಭೂಸ್ವಾಧೀನ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿಸಲಾಗುತ್ತದೆ. ಸ್ಥಳೀಯರು ಆಡಳಿತಕ್ಕೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ಸರ್ವೇ ಕಾರ್ಯ ನಡೆಯುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ನಡೆಸಿದ್ದ ಜಂಟೀ ಸರ್ವೇಯನ್ನು ಪರಿಗಣಿಸಲಾಗುತ್ತಿದೆ. ಜೊತೆಗೆ ಹೊಸದಾಗಿ ಸರ್ವೇ ನಡೆಯುತ್ತಿದೆ. ಕೆಲವರು ನಮ್ಮ ಹೆಸರು ಬಿಟ್ಟು ಹೋಗಿದೆ ಎಂದು ದೂರಿದ್ದಾರೆ. ಇದನ್ನು ಪುನರ್ ಪರಿಶೀಲನೆ ಮಾಡಲಾಗುತ್ತದೆ. ಸಂತ್ರಸ್ತರು ಯಾರು ಒತ್ತುವರಿದಾರರು ಯಾರು ಎಂದು ಗುರುತಿಸುವುದು ಸವಾಲು ಎನ್ನುವಂತಾಗಿದೆ. ಅರ್ಹರಿಗೆ ನ್ಯಾಯ ದೊರಕಿಸಿಕೊಡಲಾಗುತ್ತದೆ ಎಂದು ಹೇಳಿದರು.

ಮಂಕೋಡು ಗ್ರಾಮದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಾಕಷ್ಟು ದೂರು ಇರುವ ಹಿನ್ನೆಲೆಯಲ್ಲಿ ತನಿಖೆಗೆ ತಹಶೀಲ್ದಾರ್ಗೆ ಸೂಚನೆ ನೀಡಿದೆ. ನಗರವ್ಯಾಪ್ತಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ತೆಗೆದುಕೊಳ್ಳಿ. ತಪ್ಪಿತಸ್ತರ ವಿರುದ್ದ ಎಫ್ಐಆರ್ ದಾಖಲಿಸಿ ಎಂದು ಸೂಚಿಸಿದ ಅವರು, ಅಕ್ರಮ ಯಾರೇ ನಡೆಸಿದರೂ ಅವರ ವಿರುದ್ದ ಕ್ರಮ ನಿಶ್ಚಿತ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ವಿರೇಶಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು