ಶಿವಮೊಗ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ವರ್ಷದ ಜನ್ಮ ದಿನಾಚರಣೆಯನ್ನು ಜನ ಮಾನಸದಲ್ಲಿ ನಿಲ್ಲುವ ಹಾಗೆ ವಿಭಿನ್ನ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಫೆಬ್ರವರಿ 14 ರಿಂದ ಮಾರ್ಚ್ 14ರವರೆಗೆ ವಾಜಪೇಯಿ ಅವರ ಜನ್ಮ ಶತಮಾನೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಈ ಸಂಬಂಧ ರಾಷ್ಟ್ರ ಮಟ್ಟದ ಸೂಚನೆ ಪಕ್ಷದ ಕಡೆಯಿಂದ ನೀಡಿದ್ದಾರೆ. ಜನಮಾನಸದಲ್ಲಿ ನಿಲ್ಲುವ ಹಾಗೆ ಸಂಘಟನಾತ್ಮಕ ಕಾರ್ಯಕ್ರಮ ಮಾಡುವ ಹೆಬ್ಬಯಕೆ ಪಕ್ಷದ ಪ್ರಮುಖರದ್ದಾಗಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಕವಿ ಹದಯಿ, ಅತ್ಯುತ್ತಮ ಸಂಸದೀಯ ಪಟು. ಅತ್ಯುತ್ತಮ ಪ್ರಧಾನಿ. ಆಂತರಿಕ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತ ವಿಶ್ವಗುರು ಆಗಲು ವಾಜಪೇಯಿ ಅವರ ಶ್ರಮ ಅಪಾರವಾಗಿದೆ ಎಂದರು.

ವಾಜಪೇಯಿ ಅವರು ಜೀವಿತಾವಧಿಯಲ್ಲಿ ಮನೆಗೆ ಭೇಟಿ ನೀಡಿರುವುದು, ಭಾಷಣ, ಕಾರ್ಯಕರ್ತರ ಮನೆಗೆ ಭೇಟಿ ಕೊಟ್ಟಿರುವುದು ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ, ಮಂಡಲ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲಾ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವಾಜಪೇಯಿ ಅವರು ಶಿವಮೊಗ್ಗ ಜಿಲ್ಲೆಗೆ ಅತಿ ಹೆಚ್ಚು ಸಲ ಬಂದಿದ್ದಾರೆ. ಈ ವೇಳೆ ಅವರ ಒಡನಾಟ ಹೊಂದಿರುವ ಐವತ್ತಕ್ಕೂ ಹೆಚ್ಚು ಪ್ರಮುಖರ ಗುರುತು ಮಾಡಲಾಗಿದೆ ಎಂದರು.

ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಮೂಲಕ ಇಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವುದು ಮುಖ್ಯ ಗುರಿ ಆಗಿದೆ. ಎಲ್ಲರಲ್ಲೂ ರಾಷ್ಟ್ರ ಪ್ರೇಮ ಬರಲಿ ಎಂಬುದು ಕೇಂದ್ರ ಬಿಜೆಪಿ ವಾಂಛೆ. ಈಗಾಗಲೇ ವಾಜಪೇಯಿ ಅವರ ಜನ್ಮ ದಿನ ನಿಮಿತ್ತ ಸುಶಾಸನ ದಿನಾಚರಣೆ ಆಚರಿಸಲಾಗಿದೆ. ಶತಮಾನೋತ್ಸವ ಆಚರಣೆಯಲ್ಲಿ ಕರ್ನಾಟಕ ಮುಂಚೂಣಿ ಇದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಪ್ರಮುಖರಾದ ಶಿವರಾಜ್ ಹರಿಕಷ್ಣ, ರಮೇಶ್, ಸುಮಲತಾ, ಮಂಗಳಾ ನಾಗೇಂದ್ರ, ಸುರೇಖಾ ಮುರುಳೀಧರ, ವಿನ್ಸೆಂಟ್, ಅಣ್ಣಪ್ಪ, ಚೇತನ್, ಸತೀಶ್, ಚಂದ್ರಶೇಖರ್ ಇದ್ದರು.
ಶತಮಾನೋತ್ಸವ ಆಚರಣೆಗೆ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ, ವಿರಾಸತ್ ಸಮ್ಮೇಳನ ಆಯೋಜನೆ ಮಾಡಲಾಗುವುದು. ಗಣ್ಯರ ಆಹ್ವಾನಿಸಿ ವಿಚಾರಧಾರೆ ಹಂಚಿಕೊಳ್ಳುತ್ತಾರೆ. ವಾಜಪೇಯಿ ಅವರ ಬಗ್ಗೆ ಕತಿ ಬರೆದ ಲೇಖಕರಿಗೆ ಸನ್ಮಾನ ಮಾಡಲಾಗುವುದು. ಈ ಕಾರ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿ ಮಾಡಲಿದೆ. ಜಿಲ್ಲೆಯಲ್ಲಿ ವಾಜಪೇಯಿ ಅವರ ಜೊತೆಗಿನ ಫೋಟೋಗಳು, ಮನೆಗೆ ಭೇಟಿ ನೀಡಿರುವುದು ಇತ್ಯಾದಿ ಮಾಹಿತಿ ಇದ್ದಲ್ಲಿ ಸಮಿತಿಯ ಸುರೇಖಾ ಮುರುಳೀಧರ, ಎಸ್.ರಮೇಶ್, ವಿನ್ಸೆಂಟ್ ರೋಡ್ರಿಗಸ್, ಚೇತನ್ ಹಾಗೂ ಚಂದ್ರಶೇಖರ್ ಅವರಲ್ಲಿ ಸಂಪರ್ಕಿಸಲು ಕೋರಿದರು.