ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರು ಈ ಹಿಂದೆ ಉದ್ಭವಿಸಿದ ಹಣದುಬ್ಬರ ಪರಿಸ್ಥಿತಿ ಹಾಗೂ ನಿತ್ಯ ಬಳಕೆ ಪದಾರ್ಥಗಳ ಬೆಲೆ ಹೆಚ್ಚಳದಿಂದಾಗಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ತಡೆಹಿಡಿಯಲಾಗಿರುವ ತುಟ್ಟಿಭತ್ಯೆ ಕಂತುಗಳನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದರ ಜೊತೆಗೆ ಸಂಪ್ರದಾಯದಂತೆ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಬಿಡುಗಡೆಗೊಳಿಸಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ರಾಜ್ಯ ಸರ್ಕಾರಿ ನೌಕರರಿಗೂ ಸಹ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಅವರು ಆಯ-ವ್ಯಯ ಮಂಡನೆ ಪೂರ್ವದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಸಂಪ್ರದಾಯದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗವನ್ನು ಚರ್ಚೆಗೆ ಆಹ್ವಾನಿಸಿದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ವಿಶ್ವದಾದ್ಯಂತ ತಲೆದೋರಿದ ಕೋವಿಡ್-19 ಮಾರಕ ರೋಗದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಸಮತೋಲನಗೊಳಿಸುವ ಸಲುವಾಗಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ತಡೆ ಹಿಡಿಯಲಾಗಿತ್ತು. ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು ಹಗಲಿರುಳು ಶ್ರಮಿಸಿರುವುದನ್ನು ಮನಗಂಡು ತುಟ್ಟಿ ಭತ್ಯೆ ಮಂಜೂರು ಮಾಡುವಂತೆ ಅವರು ಮುಖ್ಯಮಂತ್ರಿಯವರನ್ನು ವಿನಂತಿಸಿದರು.

ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ, ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಹಾಗೂ ನಿರ್ವಹಣೆಗೆ ಅನುದಾನ ಮಂಜೂರು ಮಾಡಬೇಕು, ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇನ್ನಿತರ ಸಂಘದ ಕಾರ್ಯಕ್ರಮ, ನಿರ್ವಹಣೆ ಉದ್ದೇಶಕ್ಕೆ ಸಹಾಯಾನುದಾನ ಮಂಜೂರು ಮಾಡುವಂತೆ ಅವರು ಮನವಿ ಮಾಡಿದರು.

ಸರ್ಕಾರಿ ನೌಕರರಿಗೆ – ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಹಾಗೂ ನೌಕರರಿಗೆ ಸುಗಮ ಸೇವೆಗಾಗಿ ಕೆಜಿಐಡಿ ಕಚೇರಿಗಳ ಗಣಕೀಕರಣ ಕಾರ್ಯವನ್ನು ಏಪ್ರಿಲ್ 2021ರಿಂದ ಜಾರಿಗೆ ತರಬೇಕು, ನೌಕರರ ಎಲ್ಲಾ ಸೇವೆಗಳನ್ನು ಆನ್‌ಲೈನ್ ಮೂಲಕ ಜಾರಿಗೊಳಿಸಬೇಕು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ ಹಾಲಿ ನೌಕರರ ಮೇಲಿನ ಕಾರ್ಯಭಾರ ಒತ್ತಡವನ್ನು ತಗ್ಗಿಸಬೇಕು. ಶಿಕ್ಷಣ ಇಲಾಖೆಯಲ್ಲಿನ ನೌಕರರ ವೇತನ ತಾರತಮ್ಯವನ್ನು ಸರಿಪಡಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 15, 20, 25 ಮತ್ತು 30 ವರ್ಷಗಳ ವೇತನ ಬಡ್ತಿಯಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಬೇಕು. ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕ್ರಣೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಮಾಸಿಕ ವೇತನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ 21,000ರೂ. ಕನಿಷ್ಟ ವೇತನ ನಿಗಧಿಪಡಿಸಬೇಕು. ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ-2012ರಲ್ಲಿ ಅಧಿಸೂಚಿಸಲ್ಪಟ್ಟ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೆ ಸರ್ಕಾರದ ಆದೇಶದಂತೆ ಪೂರ್ಣಪ್ರಮಾಣದಲ್ಲಿ ಮನೆ ಬಾಡಿಗೆ ಭತ್ಯೆ, ವಾರ್ಷಿಕ ವೇತನ ಬಡ್ತಿ ಹಾಗೂ ನಗದು ರಹಿತ ಆರೋಗ್ಯ ಸೌಲಭ್ಯವನ್ನು ನೀಡುವಂತೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆ ದರ ಶೇ.೨೪ರಷ್ಟನ್ನು ಬೆಂಗಳೂರು ನಗರ ಜಿಲ್ಲೆಗೂ ವಿಸ್ತರಿಸುವಂತೆ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಪ್ರಸ್ತುತ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಭಾರತ ಸರ್ಕಾರ ಕೈಗೊಂಡ ಕ್ರಮಗಳು ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರರಾದ ಹಿನ್ನೆಲೆಯಲ್ಲಿ ಈ ಕಾರ್ಯನಿರ್ವಹಣೆಗೆ ಸಂಪೂರ್ಣವಾಗಿ ಸಹಕರಿಸಿದ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರಗಳು ನಿರ್ವಹಿಸಿದ ಪಾತ್ರವನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿರುವುದು ಎಲ್ಲರಲ್ಲೂ ಸಂತಸವನ್ನುಂಟು ಮಾಡಿದೆ ಎಂದು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಸರ್ಕಾರದ ಹಣಕಾಸು ವಿಭಾಗದ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಹೇಮಲತಾ, ಶಾಲಿನಿ ರಜನೀಶ್, ಸಂಘದ ಬೆಂಗಳೂರು ವಿಭಾಗದ ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ಸೇರಿದಂತೆ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!