ಶಿವಮೊಗ್ಗ.ಡಿ.28 ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿರುವ ಅಧಿಕೃತ ಪಟ್ಟಿಯಿಂದ ಕೊರಚ-ಕೊರಮ ಸಮುದಾಯವನ್ನು ಹೊರಗಿಡುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ವಿರೋಧಿಸಿ ಡಿ. 30 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕೊರಚರ ಮಹಾಸಂಘದ ಗೌರವಾಧ್ಯಕ್ಷ ಕೆ.ಎನ್. ಪ್ರಭು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 18ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅನಧಿಕೃತ ಸ್ವಯಂಪ್ರೇರಿತ ತತಕ್ಷಣಕ್ಕ್ಲೆ 49 ಸಮುದಾಯಗಳ ಸಂಘಟನೆಗಳ ಹೆಸರಿನಲ್ಲಿ ಸುವರ್ಣಸೌಧದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ ಕೆಲವು ಪುಡಿ ನಾಯಕರು ಅಲೆಮಾರಿ ಸಮುದಾಯಗಳಲ್ಲಿ ಒಡಕು ತರುವಂತಹ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಅಲೆಮಾರಿ ಸಮುದಾಯಗಳ ಕುರಿತು ಇದುವರೆಗೂ ಎಲ್ಲೂ ಧ್ವನಿ ಎತ್ತದ ಅವರು ಅಧಿಕೃತವಾಗಿ ಅಲೆಮಾರಿ ಪಟ್ಟಿಯಲ್ಲಿರುವ ಕೊರಚ- ಕೊರಮ ಸಮುದಾಯ ಒಳ ಮೀಸಲಾತಿ ಪಟ್ಟಿಗೆ ಸೇರಿರುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪರಿಶಿಷ್ಟ ಜಾತಿಯ 51 ಜಾತಿಗಳನ್ನು ಒಳಗೊಂಡAತೆ ಅಲೆಮಾರಿ ನಿಗಮ ಸ್ಥಾಪನೆ ಮಾಡಿರುವುದು ಬಿಜೆಪಿ ಸರ್ಕಾರ. ಅಲೆಮಾರಿಗಳು ಅಮಾಯಕರು, ಅವಿದ್ಯಾವಂತರು ಎಂದು ತಿಳಿದು ಸಣ್ಣ ಸಣ್ಣ ಸೂಕ್ಷö್ಮ ಸಮುದಾಯಗಳನ್ನು ಎತ್ತಿಕಟ್ಟಿ ಜಗಳ ತಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಲೆಮಾರಿಗಳ ಪ್ರತ್ಯೇಕ ಪಟ್ಟಿ ಮಾಡಿ ಅಲೆಮಾರಿಗಳನ್ನು ಗುರುತಿಸಿದ ಕಾರಣ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಪ್ರೋತ್ಸಾಹಿಸಿದಂತಾಗಿದೆ. ಹಾಗೂ ವಸತಿ ಕಲ್ಪಿಸಿಕೊಳ್ಳಲು ಅನುಕೂಲವಾಗಿದೆ. ಆದರೆ, ಕೆಲ ಸಮುದಾಯಗಳ ಸ್ವಾರ್ಥ ಪುಡಿ ನಾಯಕರು ಇಲ್ಲ ಸಲ್ಲದ ವಿಚಾರಗಳನ್ನು ಅಲೆಮಾರಿಗಳಿಗೆ ತುಂಬಿ ಕೊರಚ-ಕೊರಮರು ಬಲಾಢ್ಯರು. ಸಣ್ಣ ಸಣ್ಣ ಸಮುದಾಯಗಳ ಅನುದಾನ, ಮೀಸಲಾತಿ ಕಬಳಿಸುತ್ತಿದ್ದಾರೆ ಎಂದು ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಚಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಖಂಡಿಸಿ ಡಿ. 30ರಂದು ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಬಿ.ಎನ್. ಸುರೇಶ್, ಜಿ. ಶ್ರೀನಿವಾಸ್, ಪ್ರಕಾಶ್ ಲಿಗಾಡಿ, ಎನ್. ಸುರೇಶ್, ಸಿದ್ಧೇಶ್ ಮಾದಾಪುರ, ಅಶೋಕ್, ಪರಮೇಶಿ, ಶಿವಕುಮಾರ್ ಇನ್ನಿತರರು ಉಪಸ್ಥಿತರಿದ್ದರು.