ಶಿವಮೊಗ್ಗ,ಡಿ.೨೭: ಭಾರತ ರತ್ನ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ನಿಧನಕ್ಕೆ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮನಮೋಹನ್ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಕಾಂಗ್ರೆಸ್ನ ಹಿರಿಯ ಮುಖಂಡ ಹೆಚ್.ಎಂ.ಚಂದ್ರಶೇಖರ್, ಮನಮೋಹನ್ಸಿಂಗ್ ಅವರು ಈ ದೇಶದ ಬಹು ದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶ ಆರ್ಥಿಕ ಹಿನ್ನಡೆ ಅನುಭವಿಸಿದಾಗ ತಮ್ಮ ಚಾಣಾಕ್ಷತನದಿಂದ ಅದನ್ನು ಪಾರು ಮಾಡಿದವರು ಮತ್ತು ಭಾರತ ದೇಶ ಒತ್ತೆ ಇಟ್ಟ ಚಿನ್ನವನ್ನು ಮರಳಿ ತಂದವರು ಎಂದರು.
ಜಗತ್ತಿನ ಬಹು ದೊಡ್ಡ ರಾಷ್ಟ್ರವಾದ ಅಮೇರಿಕ ಕೂಡ ಆರ್ಥಿಕ ಹಿನ್ನಡೆ ಅನುಭವಿಸಿದಾಗ ಅಮೇರಿಕಕ್ಕೆ ಸಲಹೆಯನ್ನು ಕೂಡ ನೀಡಿದ ಕೀರ್ತಿ ಮನಮೋಹನ್ಸಿಂಗ್ ಅವರಿಗೆ ಸಲ್ಲುತ್ತದೆ. ಎರಡು ಬಾರಿ ಪ್ರಧಾನಿಯಾಗಿದ್ದ ಅವರು ಸರ್ಕಾರದ ಎಲ್ಲಾ ಬಹುದೊಡ್ಡ ಹುದ್ದೆಗಳನ್ನು ಕೂಡ ಅಲಂಕರಿಸಿದ್ದರು. ಅವರ ಕಾಲದಲ್ಲಿ ಆಧಾರ್, ಕೂಲಿಗಾಗಿ ಕಾಳು ಯೋಜನೆ, ಬ್ಯಾಂಕ್ಗಳಿಗೆ ಶಕ್ತಿ ನೀಡಿದ್ದರು. ಆರ್ಥಿಕ ತಜ್ಞರಾಗಿದ್ದ ಅವರು ದೇಶವನ್ನು ಸುಸ್ಥಿರವನ್ನಾಗಿಸಲು ಪ್ರಯತ್ನಿಸಿದವರು.
ಮನಮೋಹನ್ಸಿಂಗ್ ಅವರು ಮೌನೀಯಾಗಿದ್ದರು ಕೂಡ ತಮ್ಮ ಕೆಲಸದಲ್ಲಿ ಮೌನತನ ಇರಲಿಲ್ಲ. ಅತ್ಯಂತ ಸರಳವಾಗಿದ್ದರು, ಎಲ್ಲರ ಜೊತೆ ಪ್ರೀತಿ ಬೆಳೆಸಿಕೊಂಡಿದ್ದರು. ಭಾರತದ ಅರ್ಥವ್ಯವಸ್ಥೆಯನ್ನು ನೆಹರು ಯುಗದಿಂದ ಬಿಡಿಸಿ ಒಬ್ಬ ಯುಗ ಪ್ರವರ್ತರಾಗಿ ಇತಿಹಾಸದಲ್ಲಿ ಸ್ಥಾನ ಪಡೆದವರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು, ಪ್ರಮುಖರಾದ ಯು.ಶಿವಾನಂದ್, ಜಿ.ಡಿ.ಮಂಜುನಾಥ್, ಸೀತಾರಾಮ್ ನಾಯಕ್, ಸುವರ್ಣನಾಗರಾಜ್, ಭಾರತಿ ರಾಮಕೃಷ್ಣ, ಮಹಮ್ಮದ್ ಆರೀಫುವುಲ್ಲಾ, ಶ್ಯಾಮ್ಸುಂದರ್, ಎ.ಬಿ.ಮಾರ್ಟಿಸ್, ಎಂ.ಎಸ್.ಸಿದ್ದಪ್ಪ, ಶಿವಣ್ಣ, ಎನ್.ಟಿ.ಕುಮಾರ್, ಶಿವಕುಮಾರ್, ಎಸ್.ಕೆ.ಪ್ರಕಾಶ್, ಹೆಚ್.ಎ.ಮಧು, ಆಫ್ರಿದಿ, ನವುಲೆ ಮಂಜುನಾಥ್ ಮೊದಲಾದವರು ಇದ್ದರು.