ಶಿವಮೊಗ್ಗ.ಡಿ.26 ನಗರದ ಪ್ರಮುಖ ರಸ್ತೆಯಾದ ಬಾಲರಾಜ್ ಅರಸ್ ರಸ್ತೆಯಲ್ಲಿ ಭೂಗತ ಕೇಬಲ್ ನ ಜಂಕ್ಷನ್ ಬಾಕ್ಸ್(ಗುಂಡಿಗಳಲ್ಲಿ) 35ಕ್ಕೂ ಹೆಚ್ಚಿದ್ದು, ರಸ್ತೆಗಿಂತ ಕೆಲವೆಡೆ ಎತ್ತರದಲ್ಲಿದ್ದರೆ, ಇನ್ನು ಕೆಲವೆಡೆ ರಸ್ತೆಗಿಂತ ಕೆಳಗಿವೆ. ಕೆಲವು ಕಡೆ ಮುಚ್ಚಳಗಳು ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಡಿಸಿಸಿ ಬ್ಯಾಂಕ್ ಎದುರು ಯು ಟರ್ನ್ ಇದ್ದು, ಅಲ್ಲಿ ಬೃಹತ್ ಗುಂಡಿ ತೋಡಿ 4 ತಿಂಗಳ ಮೇಲಾಗಿದೆ.
ವಿದ್ಯುತ್ ಕೇಬಲ್ ಇರುವ ಗುಂಡಿಯಲ್ಲಿ ಪೂರ್ತಿ ನೀರು ತುಂಬಿದ್ದು ಆ ಜಾಗದಲ್ಲಿ ಪ್ರತಿನಿತ್ಯ ಅಪಘಾತಗಳಾಗುತ್ತಿದ್ದು, ಸ್ಮಾರ್ಟ್ ಸಿಟಿ ಮತ್ತು ಮೆಸ್ಕಾಂ ಅಧಿಕಾರಿಗಳ ಸಂಘರ್ಷದಿಂದಾಗಿ ಸಾರ್ವಜನಿಕರು ಪರದಾಡುವ ಸ್ಥಿತಿಗೆ ಬಂದಿದ್ದಾರೆ.
ಎರಡು ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಭಾರಿ ಅಪಾಯ ಸಂಭವಿಸುವ ಮುನ್ನ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.