ಬೆಂಗಳೂರು, ಡಿ.24:
ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದಿರುವ 5 ಮತ್ತು 8ನೇ ತರಗತಿ ಮಕ್ಕಳನ್ನು ‘ಅನುತ್ತೀರ್ಣ’ ಮಾಡಬಹುದೆಂಬ ಹೊಸ ನಿಯಮ ಜಾರಿ ಗೊಳಿಸಿದೆ. ಇದರಿಂದಾಗಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ಎಂಟನೇ ತರಗತಿ ವರೆಗೂ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂಬ ನಿಯಮ ಬದಲಾಗಲಿದೆ.
ಪರಿಷ್ಕೃತ ನಿಯಮದ ಪ್ರಕಾರ, ಎಂದಿನಂತೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಎರಡು ತಿಂಗಳ ತರಬೇತಿ ನೀಡಿ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ. ಒಂದೊಮ್ಮೆ ಅಲ್ಲಿಯೂ ಕಲಿಕಾ ಗುಣಮಟ್ಟ ಸುಧಾರಿಸಿಕೊಳ್ಳುವಲ್ಲಿ ವಿಫಲರಾದರೆ ಅಂತಹ ಮಕ್ಕಳು ಹಿಂದಿನ ತರಗತಿಯಲ್ಲೇ ಮುಂದುವರಿಯಬೇಕಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಆ ಮಕ್ಕಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ.
ಯಾರಿಗೆಲ್ಲ ಅನ್ವಯ?: ಕೇಂದ್ರ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಆದೇಶ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯ, ನವೋದಯ ಮತ್ತು ಸೈನಿಕ ಶಾಲೆಗಳು ಸೇರಿ 3 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ತಕ್ಷಣದಿಂದಲೇ ಅನ್ವಯವಾಗಲಿದೆ.
ರಾಜ್ಯದ ಪರಿಸ್ಥಿತಿ ಏನು?: ಕರ್ನಾಟಕದಲ್ಲಿ ಎಂಟನೇ ತರಗತಿವರೆಗೂ ಮಕ್ಕಳನ್ನು ‘ಅನುತ್ತೀರ್ಣ’ ಮಾಡುವ ಪದ್ಧತಿ ಇಲ್ಲ. ಇದೀಗ ಹೊಸ ನಿಯಮ ಜಾರಿಯಾಗಿರುವುದರಿಂದ ಸರ್ಕಾರದ ಹಂತದಲ್ಲಿ ರ್ಚಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹೊಸ ನಿಯಮದ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ 5 ಮತ್ತು 8ನೇ ತರಗತಿಗೆ ಯಾರು ಪರೀಕ್ಷೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆಯಾಗಿ ಪ್ರಕರಣ ಸುಪ್ರೀಂಕೋರ್ಟ್ಗೆ ತಲುಪಿತ್ತು. ಪರೀಕ್ಷೆಯನ್ನು ಮಂಡಳಿಯಿಂದ ನಡೆಸಬೇಕೋ ಅಥವಾ ಶಾಲಾ ಹಂತದಲ್ಲಿ ನಡೆಸಬೇಕೋ ಎಂಬುದು ರಾಜ್ಯದ ವಿಚಾರವಾಗಿತ್ತು. ಆದರೆ, ‘ಫೇಲ್’ ಮಾಡುವ ವಿಚಾರವಾಗಿ ರಾಜ್ಯದಲ್ಲಿ ಚರ್ಚಾ ವಿಷಯವಾಗಿರಲಿಲ್ಲ ಎಂದರು. ಆದರೆ, ಈಗ ಕೇಂದ್ರ ಸರ್ಕಾರವು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಫೇಲ್ ಮಾಡಲು ಹೊರಟಿರುವುದು ಹೊಸ ವಿಷಯವಾಗಿದೆ. ಹೀಗಾಗಿ, ಸರ್ಕಾರದ ಹಂತದಲ್ಲಿಯೇ ರ್ಚಚಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪರೀಕ್ಷೆ ಪ್ರಹಸನ: ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸುವ ಮತ್ತು ಎಸ್ಎಸ್ಎಲ್ಸಿ ಪರೀಕ್ಷಾ ಭಯ ಹೋಗಲಾಡಿಸುವುದಕ್ಕಾಗಿ 2022-23ನೇ ಸಾಲಿನಲ್ಲಿ ಮೊದಲ ಬಾರಿಗೆ 5 ಮತ್ತು 8ನೇ ತರಗತಿಗೆ ಮೌಲ್ಯಾಂಕನ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಎಂಟನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ ಮತ್ತು ಮಂಡಳಿ ಹಂತದಲ್ಲಿ ಪರೀಕ್ಷೆ ನಡೆಸುವಂತಿಲ್ಲ. ಹಾಗಾಗಿ ಸರ್ಕಾರದ ನಿರ್ಧಾರ ಆರ್ಟಿಇ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಖಾಸಗಿ ಶಾಲಾ
ಆಡಳಿತ ಮಂಡಳಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠವು ಮೌಲ್ಯಾಂಕನ ಪರೀಕ್ಷೆಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ವಿಭಾಗೀಯ ಪೀಠವು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ನಂತರ ಪ್ರಕರಣ ಸುಪ್ರೀಂಕೋರ್ಟ್ಗೆ ವರ್ಗಾವಣೆಗೊಂಡಿತ್ತು. ಅಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಸರ್ಕಾರವು ತನ್ನ ಉದ್ದೇಶವನ್ನು ಮತ್ತು ಆರ್ಟಿಇ 2019ರ ತಿದ್ದುಪಡಿಯನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿತ್ತು. ಪ್ರಸ್ತುತ 5 ಮತ್ತು 8ನೇ ತರಗತಿ ಮೌಲ್ಯಾಂಕನವನ್ನು ವಾಪಸ್ ಪಡೆದಿದೆ. ಈ ನಡುವೆ 2024ರಲ್ಲಿ ಸರ್ಕಾರ ಮಂಡಳಿಯಿಂದ ಪರೀಕ್ಷೆ ನಡೆಸಿದರೆ, ಶಾಲೆಗಳು ತಮ್ಮ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಿದ್ದವು. ಹೀಗಾಗಿ ಮಕ್ಕಳು ಎರಡೆರಡು ಬಾರಿ ಪರೀಕ್ಷೆ ಬರೆಯುವಂತಾಗಿತ್ತು. ಅಲ್ಲದೆ, ಸರ್ಕಾರವು
ಮೌಲ್ಯಾಂಕನ ವಿಚಾರದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳದ ಪರಿಣಾಮ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆಯುವಲ್ಲಿಯೂ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ 5, 8ನೇ ತರಗತಿಯಲ್ಲಿ ಅನುತ್ತೀರ್ಣಗೊಳಿಸಬಹುದು ಎಂದು ಕೇಂದ್ರ ಸರ್ಕಾರವೇ ನಿಯಮ ಬದಲಾಯಿಸಿರುವ ಕಾರಣ, ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರವೂ ಈ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ಮರು ಜಾರಿಗೆ ತರುವ ಪ್ರಯತ್ನ ಸುಗಮ ಆಗಬಹುದು ಎನ್ನಲಾಗುತ್ತಿದೆ.
ಮುಂದೇನು?: ಕರ್ನಾಟಕದಲ್ಲಿ 2012ರಿಂದ ಆರ್ಟಿಇ ಜಾರಿಯಲ್ಲಿದೆ. ಆ ಪ್ರಕಾರ, 8ನೇ ತರಗತಿವರೆಗೂ ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವನ್ನು ಅನುಷ್ಠಾನ ಮಾಡಲಾಗಿದೆ. ಈಗ ಮತ್ತೆ ಅನುತ್ತೀರ್ಣ ನಿಯಮ ಜಾರಿಗೊಳಿಸಲು ರಾಜ್ಯದ ಮಟ್ಟದಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ.
ಎಲ್ಲೆಲ್ಲಿ ಜಾರಿಯಲ್ಲಿದೆ?: 2019ರಲ್ಲಿ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಅನುತ್ತೀರ್ಣ ನಿಯಮ ಗುಜರಾತ್, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಸೇರಿ 16 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ.
ವಿರೋಧ ಎಲ್ಲಿ?: 5,8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವುದಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದು ಮಕ್ಕಳ ಮೇಲೆ ಒತ್ತಡ ಹೆಚ್ಚಿಸುತ್ತದೆ ಎಂಬುದು ಅಲ್ಲಿನ ಸರ್ಕಾರದ ವಾದ.
ಹೊಸ ನಿಯಮದಲ್ಲಿ ಏನಿದೆ?
ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡುವಂತಿಲ್ಲ