ಶಿವಮೊಗ್ಗ: ತಾವು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಎರಡು ವರ್ಷಗಳೇ ಕಳೆದರೂ ವಿವಿ ತಮಗೆ ಇನ್ನೂ ತೇರ್ಗಡೆಯ ಅಂಕಪಟ್ಟಿ ನೀಡದೇ ವಿವಿ ಸತಾಯಿಸುತ್ತಿದೆ ಎಂದು ಅಂಕಪಟ್ಟಿ ವಂಚಿತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಮ್.ಎಸ್ಸಿ. ತೇರ್ಗಡೆಯಾದ ವಿದ್ಯಾರ್ಥಿ ಅನಿಕೇತ್ ಮಾತನಾಡಿ ನಾವು ವ್ಯಾಸಂಗ ಮಾಡುತ್ತಿರುವಾಗಲೇ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಘಟಿಕೋತ್ಸವ ಪ್ರಮಾಣಪತ್ರ ಶುಲ್ಕ ಎಲ್ಲವನ್ನೂ ವಿವಿ ನಿಗಧಿಪಡಿಸಿದ ಸಮಯದೊಳಗೇ ತುಂಬಿದ್ದೆವು. ನಮ್ಮ ಪದವಿ ಮುಗಿದ ತಕ್ಷಣ ಅಂಕಪಟ್ಟಿ, ಪದವಿ ಪ್ರಮಾಣಪತ್ರ ನೀಡುವ ಜವಾಬ್ದಾರಿ ವಿಶ್ವವಿದ್ಯಾಲಯದ್ದಾಗಿತ್ತು. ಆದರೆ ಇಂದಿನವರೆಗೂ ವಿವಿ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
ಅಂಕಪಟ್ಟಿ, ಪದವಿ ಪ್ರಮಾಣಪತ್ರದ ಕುರಿತು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅನೇಕ ಪತ್ರವ್ಯವಹಾರ ಮಾಡಿದರೂ ಅವರಿಂದ ಯಾವ ಸ್ಪಂದನೆಯೂ ದೊರಕಿಲ್ಲ ಎಂದು ಕಿಡಿಕಾರಿದರು.
ಮನಶ್ಯಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಮುಗಿಸಿದ ದೃಶ್ಯ ಮಾತನಾಡಿ ಇಂದಿನವರೆಗೂ ವಿವಿ ನನಗೆ ಒಂದೇ ಒಂದು ಸೆಮಿಸ್ಟರ್ ನ ಅಂಕಪಟ್ಟಿಯನ್ನೂ ನೀಡಿಲ್ಲ. ಕೇಳಿದರೆ ಯುಯುಸಿಎಂಎಸ್ ತಂತ್ರಾಂಶದ ಸಮಸ್ಯೆ ಇದೆ. ಕಿಯೋನಿಕ್ಸ್ ಗೆ ಅಂಕಪಟ್ಟಿ ಪೂರೈಕೆಯ ಜವಾಬ್ದಾರಿ ನೀಡಲಾಗಿದೆ ಎನ್ನುತ್ತಾರೆ. ಸೈಬರ್ ಕೆಫೆಯಲ್ಲಿ ವಿವಿ ವೆಬ್ ಸೈಟಿಂದ ಡೌನ್ ಲೋಡ್ ಮಾಡಿಕೊಳ್ಳಿ ಅಂತಾರೆ. ಬಿಳೆ ಹಾಳೆಯಲ್ಲಿ ಅಂಕ ಪಟ್ಟಿ ಪ್ರಿಂ???ಟ್ ತೆಗೆದುಕೊಳ್ಳಬೇಕು. ಮುಂದಿನ ಶಿಕ್ಷಣಕ್ಕೆ, ನೌಕರಿಗೆ ಅಂತ ಹೋದರೆ ಅಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಕೊಡುವುದಿಲ್ಲ. ವಿವಿ ಮೂಲ ಅಂಕಪಟ್ಟಿ ಕೊಡದೆ ನಾವು ಎಲ್ಲೂ ಹೋಗಲಿಕ್ಕಾಗುವುದಿಲ್ಲ ಎಂದು ದೂರಿದರು.
ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಒಂದೆರಡು ದಿನದಲ್ಲಿ ಮೂಲ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಪೂರೈಸದಿದ್ದರೆ ವಿವಿಯ ಬರುವ ಘಟಿಕೋತ್ಸವದಲ್ಲಿ ಉಗ್ರ ಪತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ನಾತಕೋತ್ತರ ಪದವಿಧರರಾದ ಭರತ್, ಜ್ಞಾಪಕ ಶೆಟ್ಟಿ, ವರುಣ್ ಕೆ.ಎಸ್. ಗೋವರ್ಧನ ಮೊದಲಾದವರಿದ್ದರು.