ಶಿವಮೊಗ್ಗ ಡಿ.23: ಸಾಗರ : ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜು ಕೆ.ಆರ್. ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದರು.
ಮನವಿಯಲ್ಲಿ ಡಿ. ೨೧ರಂದು ಬೆಳಿಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜು ಎಂಬುವವರ ಮೇಲೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿಶ್ಚಯಕುಮಾರ್ ವಿ. ಮತ್ತು ಅವರ ತಂದೆ ವಿಜಯಕುಮಾರ್ ಎಸ್.ಎನ್. ಎಂಬುವವರು ಹಲ್ಲೆ ಮಾಡಿದ್ದಾರೆ. ಇದರ ಜೊತೆಗೆ ಕಾಲೇಜಿ ಇತರೆ ಪ್ರಾಧ್ಯಾಪಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅಭಿಪ್ರಾಯಗಳನ್ನು ಹರಿದು ಬಿಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಾಧ್ಯಾಪಕ ರಾಜು ಅವರು ಉತ್ತಮ ಉಪನ್ಯಾಸಕರಾಗಿದ್ದು ಕಾಲೇಜಿನಲ್ಲಿ ಅತ್ಯಂತ ನಿಷ್ಟೆಯಿಂದ ಪಾಠ ಮಾಡುತ್ತಿದ್ದಾರೆ. ಯಾರ ತಂಟೆಗೂ ಹೋಗದೆ ತಮ್ಮಷ್ಟಕ್ಕೆ ತಾವು ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ದುಡಿಯುತ್ತಿದ್ದಾರೆ. ಅಂತಹ ಉಪನ್ಯಾಸಕರ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ತಕ್ಷಣ ಹಲ್ಲೆ ಮಾಡಿರುವ ತಂದೆ ಮತ್ತು ಮಗನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕ್ರಮದ ಭರವಸೆ : ಕಾಲೇಜಿನ ಎದುರು ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಯತೀಶ್ ಆರ್., ಪ್ರಾಧ್ಯಾಪಕ ರಾಜು ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಹಲ್ಲೆಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಮಧುಚಂದ್ರ, ರಕ್ಷಿತ್ ಕೆ.ಎಚ್., ಶ್ರೇಯಸ್, ಯೋಗೇಶ್, ಶೈಲಜ, ವೈಷ್ಣವಿ, ಅಮಿತಾ, ಧನ್ಯ ಡಿ., ಪವನಕುಮಾರ್, ಗಜೇಂದ್ರ, ನಿಖಿಲ್, ಮದು ಎಂ.ಬಿ. ಇನ್ನಿತರರು ಹಾಜರಿದ್ದರು