ಶಿವಮೊಗ್ಗ,ಡಿ.20: ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘಕ್ಕೆ 2024-29ನೇ ಸಾಲಿಗೆ ಡಿ.22ರ ಬೆಳಿಗ್ಗೆ 9ರಿಂದ 4ಗಂಟೆಯವರೆಗೆ ವೀರಶೈವ ಕಲ್ಯಾಣ ಮಂದಿರದ ಪಕ್ಕದ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ನಡೆಯುವ ನಿರ್ದೇಶಕರ ಚುನಾವಣೆಯಲ್ಲಿ ‘ನಮ್ ಟೀಮ್ನ ಅಭ್ಯರ್ಥಿಗಳಿಗೆ ಮತದಾರರು ತಮ್ಮ ಅಮೂಲ್ಯವಾದ ಮತ ನೀಡಿ ಜಯಗೊಳಿಸಿ ಕೊಡಬೇಕೆಂದು ಸಂಘದ ಹಾಲಿ ಅಧ್ಯಕ್ಷ ತಾರಾನಾಥ್ ಕೆ.ಎಸ್. ಅವರು ಮನವಿ ಮಾಡಿಕೊಂಡರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಮ್ಮ ತಂಡದ 8 ಅಭ್ಯರ್ಥಿಗಳು ಜಯಗಳಿಸಿದ್ದರು. 5ವರ್ಷದ ಆಡಳಿತಾವಧಿಯಲ್ಲಿ ಸಂಘ ಕಾರ್ಯಾಲಯ, ಸಭಾ ಭವನದ ಸುಸಜ್ಜಿತ ಕಟ್ಟಡವನ್ನು 2.8ಕೋಟಿ ರೂ.ವೆಚ್ಚದಲ್ಲಿ ವಿನೋಬನಗರದ ತಿಮ್ಮಕ್ಕ ಬಡಾವಣೆಯಲ್ಲಿ ನಿರ್ಮಿಸಲಾಗಿದೆ ಎಂದರು.
ಮನೆ ಆಧಾರ ಸಾಲ ಮತ್ತು ನಿವೇಶನ ಆಧಾರ ಸಾಲವನ್ನು 30ಲಕ್ಷದಿಂದ 50ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇವರೆಗಿನ ಇತಿಹಾಸದಲ್ಲಿ ಸಂಘವು ಅತಿ ಹೆಚ್ಚಿನ 63ಲಕ್ಷ 64ಸಾವಿರ ನಿವ್ವಳ ಲಾಭಗಳಿಸಿದೆ. ಪ್ರಸ್ತುತ ನಮ್ಮ ಅವಧಿಯಲ್ಲಿ 324 ಸದಸ್ಯರನ್ನು ನೂತನವಾಗಿ ಸೇರ್ಪಡೆ ಮಾಡಿಕೊಂಡು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ನಮ್ಮ ಮುಂದಿನ ಯೋಜನೆಗಳಾದ ಕ್ಷೇಮನಿಧಿ ಮೊತ್ತವನ್ನು 7ಸಾವಿರದಿಂದ 10ಸಾವಿರಕ್ಕೆ ಹೆಚ್ಚಿಸುವುದು. 100ನೇ ವರ್ಷದ ಶತಮಾನೋತ್ಸವದ ಸವಿ ನೆನಪಿಗಾಗಿ ಮತ್ತೊಂದು ನಿವೇಶನ ಖರೀದಿ, ಆಧಾರ ಸಾಲವನ್ನು 50ಲಕ್ಷದಿಂದ 75ಲಕ್ಷಕ್ಕೆ ಹೆಚ್ಚಿಸುವುದು. ಜಾಮೀನು ಸಾಲ 75ರಿಂದ 1ಲಕ್ಷಕ್ಕೆ ಏರಿಸುವುದು. 4ಚಕ್ರ ವಾಹನಕ್ಕೆ ಸಾಲ ಸಾಲಸೌಲಭ್ಯ, ಹಳೇ ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ, ಪ್ರತಿಭಾ ಪುರಸ್ಕಾರದ ನಗದು ಮೊತ್ತವನ್ನು ಹೆಚ್ಚಿಸುವುದು ಮುಂದಿನ ದಿನಗಳಲ್ಲಿ ಸಂಘವು ‘ಎ ಶ್ರೇಣಿ ಹೊಂದಲು ಪ್ರಯತ್ನ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಸAಘವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ನಮ್ ಟೀಮ್ನ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಸAಘದ ನಿರ್ದೇಶಕ ಬಳ್ಳೇಕೆರೆ ಸಂತೋಷ್ ಮಾತನಾಡಿ, ಸಂಘಕ್ಕೆ ಹೆಚ್ಚಿನ ಸಮಾಜ ಬಾಂಧವರು ಷೇರುದಾರರನ್ನಾಗಿಸಲು ನಗರದ ಎಲ್ಲಾ ವಾರ್ಡ್ಗಳಲ್ಲೂ ಷೇರು ಅಭಿಯಾನ ನಡೆಸಲಾಗುವುದು. ಸಂಘವನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧಿಗಳಾದ ಕೆ.ಸಿ.ಪಾಲಾಕ್ಷಪ್ಪ, ಎಸ್.ಮುರುಗೇಶ್, ಜಿ.ವಿ.ರತ್ನಮ್ಮ, ಹೆಚ್.ಆರ್.ರಾಜಶೇಖರ್, ಎಂ.ರುದ್ರಪ್ಪ, ಲೋಕೇಶ್ವರ, ಶಶಿಧರ, ಶಾಂತಾ ಆನಂದ್, ಶಿವಾನಂದ್, ಸುರೇಶ್ ಎಂ.ಎಸ್., ಮೀಸಲು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಚನ್ನೇಶ್ ಉಪಸ್ಥಿತರಿದ್ದರು.