ಸಾಗರ ಡಿ.20 : ತಾಲ್ಲೂಕಿನ ತಾಳಗುಪ್ಪ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ಲಿಸದೆ ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ ಆರೋಪಿಸಿ ಗ್ರಾಮಸ್ಥರು ಕಾನ್ಲೆ ಬಸ್ ನಿಲ್ದಾಣದ ಎದುರು ರಾಷ್ಟ್ರಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ ಈ ಭಾಗದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಸಾಗರ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ತುರ್ತು ಸಂದರ್ಭದಲ್ಲಿ ಅವರಿಗೆ ಬಸ್ ಸೌಲಭ್ಯ ಸಿಗುತ್ತಿಲ್ಲ. ಬಸ್ ಸೌಲಭ್ಯ ಸಿಗದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಾಳಗುಪ್ಪ ಭಾಗದಲ್ಲಿ ಹೆಚ್ಚು ಸರ್ಕಾರಿ ಬಸ್ಗಳೆ ಇರುವುದರಿಂದ ವಿದ್ಯಾರ್ಥಿಗಳು ಅದನ್ನೆ ನಂಬಿಕೊಂಡಿದ್ದಾರೆ. ಆದರೆ ಬಹುತೇಕ ಸರ್ಕಾರಿ ಬಸ್ ಚಾಲಕರು ವಿದ್ಯಾರ್ಥಿಗಳಿಗೆ ಸೇವೆ ನೀಡಲು ಒಪ್ಪುತ್ತಿಲ್ಲ. ವಿದ್ಯಾರ್ಥಿಗಳು ಬಸ್ಗೆ ಕೈ ಮಾಡಿದರೂ ನಿಲ್ಲಿಸುತ್ತಿಲ್ಲ. ತಕ್ಷಣ ಸರ್ಕಾರಿ ಬಸ್ಗಳನ್ನು ಕಾನ್ಲೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಮೇಲೆ ಸ್ಥಳಕ್ಕೆ ಬಂದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಶಿವಮೂರ್ತಿ ಮಂಡಗಳಲೆ, ಅಣ್ಣಪ್ಪ ಕಾನ್ಲೆ ಇನ್ನಿತರರು ಹಾಜರಿದ್ದರು