ಶಿವಮೊಗ್ಗ, ಡಿ.13:
ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 156 ರಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನಗಳ ಅಭಿವೃದ್ಧಿ ಮಾಡುವ ಕುರಿತು ರೈತರು ಮತ್ತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಆರಂಭಿಕವಾಗಿ ಪೂರ್ವಭಾವಿ ಸಭೆಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಯಿತು.
ಈ ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಪರ-ವಿರೋಧಗಳ ಚರ್ಚೆ ನಡೆಯಿತು.
ಭೂಮಿ ಕಳೆದುಕೊಂಡ ಬಗರ್ಹುಕುಂ ರೈತರಿಗೆ 40*60 ನಿವೇಶನ ಹಾಗೂ ತಲಾ ಎಕರೆಗೆ 3 ಲಕ್ಷ ನೀಡುವುದಾಗಿ ಸೂಡ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ ಅಂತಿಮವಾಗಿ ಡಿ.18 ರಂದು ಮತ್ತೊಮ್ಮೆ 156
ಸರ್ವೆ ನಂಬರ್ನಲ್ಲಿ ಬರುವ ಎಲ್ಲಾ ರೈತರನ್ನು ಒಳಗೊಂಡಂತೆ ಸಭೆ ಕರೆದು ಸಾಧಕ ಬಾಧಕಗಳ ಕುರಿತು ಚರ್ಚಿಸುವ ಕುರಿತು ನಿರ್ಧರಿಸಲಾಯಿತು.
ಈ ವೇಳೆ ಸೂಡ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಆರ್.ವಿಜಯಕುಮಾರ್, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಸೂಡಾ ಆಯುಕ್ತರಾದ ವಿಶ್ವನಾಥ್ ಪಿ. ಮುದಜ್ಜಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್. ಎಲ್. ಷಡಾಕ್ಷರಿ, ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ಮತ್ತಿತರರಿದ್ದರು