ಶಿವಮೊಗ್ಗ,ಅ.೨೬:ಗೃಹ ಮಂತ್ರಿಗಳಾದ ಡಾ.ಜಿ. ಪರಮೇಶ್ವರ್ರವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್.ಸಿ. ಯೋಗೇಶ್ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು.
ಶಿವಮೊಗ್ಗ ನಗರವು ಬೃಹದಾಕಾರವಾಗಿ ಬೆಳೆದಿದ್ದು ಜನಸಂಖ್ಯೆಯು ಸಹ ಅಧಿಕವಾಗಿದ್ದು ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಪೊಲೀಸ್ ಇಲಾಖೆಯವರು ಹಾಗೂ ಅಧಿಕಾರಿಗಳು ಶಿವಮೊಗ್ಗ ನಗರದ ಸಾರ್ವಜನಿಕರೊಂದಿಗೆ ಸಹಕರಿಸುತ್ತಾ ಬಂದಿರುತ್ತಾರೆ ಹಾಗೂ ಕೆಲವು ಅವಶ್ಯಕತೆಗಳನ್ನು ನೆರವೇರಿಸಿ ಕೊಡಬೇಕೆಂದು ವಿನಂತಿಸಿದರು.
ಶಿವಮೊಗ್ಗದಲ್ಲಿ ಕಮಿಷನರ್ ಕಚೇರಿ ನಿರ್ಮಾಣ ಮಾಡಬೇಕು. ಶಿವಮೊಗ್ಗ ನಗರದ ಗೋಪಾಲ ಭಾಗದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಬೇಕು. ಶಿವಮೊಗ್ಗ ನಗರದ ಏರ್ಪೋರ್ಟ್ಗೆ ನಿರ್ದಿಷ್ಟ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಬೇಕು. ಶಿವಮೊಗ್ಗ ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು ಇದರ ದೃಷ್ಟಿಯಿಂದ ಟ್ರಾಫಿಕ್ ಪೊಲೀಸ್ ಸ್ಟೇಷನ್ ಪ್ರತ್ಯೇಕವಾಗಿ ಗ್ರಾಮಾಂತರ ಭಾಗಕ್ಕೆ ಹಾಗೂ ನಗರ ಭಾಗದಲ್ಲಿ ಮತ್ತೊಂದು ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಮಾಡಬೇಕು. ಪೊಲೀಸ್ ಇಲಾಖೆಯವರಿಗೆ ಆರೋಗ್ಯ ದೃಷ್ಟಿಯಿಂದ ಪೊಲೀಸ್ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ನಿಗಮ ಮಂಡಳಿ ಅಧ್ಯಕ್ಷ ರವಿಕುಮಾರ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಮಾಜಿ ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳು ರಂಗೇಗೌಡ, ಚಿನ್ನಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.