ಶಿವಮೊಗ್ಗ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಸೆ. 5 ರಂದು ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮಕ್ಕಾಗಿ ಶಿವಮೊಗ್ಗಕ್ಕೆ ಅಂದು ಬೆಳಗ್ಗೆ ಆಗಮಿಸಲಿರುವ ಅವರು ಮಧ್ಯಾಹ್ನ 2 ಗಂಟೆಗೆ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರು ನಗರಕ್ಕೆ ಆಗಮಿಸುತ್ತಿದ್ದು, ಜಿಲ್ಲೆಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಜಿಲ್ಲೆಯ ಜೆಡಿಎಸ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ನಮ್ಮ ನಾಯಕರ ಆಗಮನ ಎಲ್ಲರಲ್ಲೂ ಉತ್ಸಾಹ ತಂದಿದೆ. ಬೂತ್ ಮಟ್ಟದಲ್ಲಿ ಸದೃಢವಾಗಿ ಪಕ್ಷ ಕಟ್ಟುವ ಕಾರ್ಯ ಪ್ರಾರಂಭವಾಗಿದೆ.
ಎಲ್ಲಾ ಕಡೆ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂದು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುತ್ತಿದ್ದಾರೆ. ಆ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ಜಿಲ್ಲಾ ಘಟಕದಿಂದ ಅಭಿನಂದಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್, ಮಧುಕುಮಾರ್, ದಾದಾಪೀರ್, ರಮೇಶ್ ನಾಯ್ಕ್, ರಾಕೇಶ್ ಡಿಸೋಜ, ಸಿದ್ಧಪ್ಪ, ತ್ಯಾಗರಾಜ್, ಹೆಚ್.ಎಂ. ಸಂಗಯ್ಯ, ಕಾಂತರಾಜ್, ಗೋಪಿ ಮೊದಲಿಯಾರ್ ಮೊದಲಾದವರಿದ್ದರು.