ಶಿವಮೊಗ್ಗ: ಶ್ರೀ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠದ ವತಿಯಿಂದ ಆ. 5ರಿಂದ ಸೆ. 1ರವರೆಗೆ ಶ್ರಾವಣ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಸಂಚಾಲಕ ಉಮೇಶ್ ಆರಾಧ್ಯ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರಾವಣ ಚಿಂತನ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಮಠ ನಡೆಸಿಕೊಂಡು ಬರುತ್ತಿದೆ. ಮಠದಲ್ಲಿ ನಡೆಯುತ್ತಿದ್ದ ಶ್ರಾವಣಮಾಸದ ಕಾರ್ಯಕ್ರಮಗಳು ಇದೀಗ ನಗರದ ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಸುಮಾರು ಒಂದು ತಿಂಗಳ ಕಾಲ ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಸ್ಮರಣೀಯ ಸಾಧಕರು, ಮೌಲಿಕ ಚಿಂತನೆ, ಉಪನ್ಯಾಸ ಮಾಲಿಕೆ, ಮನೆ ಮನೆಗಳಲ್ಲಿ ಶ್ರಾವಣ ಚಿಂತನ, ವಚನ ಸಂಗೀತ, ಸಂವಾದ, ಆಶೀರ್ವಚನ, ಅಲ್ಲಮ ರಂಗ ವಚನ ರೂಪಕ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಆ, 5ರಂದು ಶ್ರೀಗಳ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಬೆಕ್ಕಿನ ಕಲ್ಮಠದಲ್ಲಿ ಸಂಜೆ 6.3ಕ್ಕೆ ನಡೆಯಲಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದರು.
ಸೆ. 1ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿದಿನ ಸೇವಾಕರ್ತರು ತಮ್ಮ ಬಡಾವಣೆಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ನಡೆಸಿಕೊಡುವರು. ಉಪನ್ಯಾಸಕರು, ಕವಿಗಳು ಪ್ರತಿದಿನ ಉಪನ್ಯಾಸ ನೀಡುವರು. ಜೊತೆಗೆ ವಚನ ಸಂಗೀತ ಇರುತ್ತದೆ. ಆ. 19 ರಂದು ಸಂಜೆ 6ಗಂಟೆಗೆ ಬೆಕ್ಕಿನ ಕಲ್ಮಠದಲ್ಲಿ 539ನೇ ಮಾಸಿಕ ಶಿವಾನುಭವ ಗೋಷ್ಠಿ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಲ್. ವ್ಯೋಮಕೇಶ್ ಆರಾಧ್ಯ, ಹೆಚ್.ಎಂ. ಕೊಟ್ರೇಶ್, ಕರಿಬಸವಯ್ಯ ಇದ್ದರು.