ಶಿವಮೊಗ್ಗ,ಅ.೧: ನಗರ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಗೋವಿಂದಾಪುರ ಆಶ್ರಯ ವಸತಿ ಯೋಜನೆಯ ಬಾಕಿ ಕಾಮಗಾರಿಯ ಪ್ರಗತಿ ಕುರಿತಂತೆ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲಿಗೆ ಇಂದು ಆಗಮಿಸಿ ಎರಡು ದಿನ ಇಲ್ಲೆ ಇದ್ದು ಮಾಹಿತಿ ಪಡೆಯಲಿದ್ದಾರೆ ಎಂದು ಶಾಸಕ ಎಸ್. ಎನ್.ಚನ್ನಬಸಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಜಿ+೨ ಮಾದರಿಯ ಆಶ್ರಯ ಮನೆಗಳ ಕೆಲಸ ಕಳೆದ ಏಳು ವರ್ಷಗಳಿಂದ ನಡೆಯುತ್ತಿದೆ. ಆದರೂ ಇನ್ನೂ ಪೂರ್ಣವಾಗಿಲ್ಲ. ಶೀಘ್ರ ಪೂರ್ಣಗೊಳಿಸುವಂತೆ ಸಚಿವರನ್ನು ಕೋರಲಾಗಿತ್ತು. ಅವರು ಇಲ್ಲಿಗೆ ಬಂದು ಸಭೆ ಮಾಡುವುದಾಗಿ ಹೇಳಿದ್ದರು. ಆದರೆ ಬಂದಿರಲಿಲ್ಲ. ಈಗ ರಾಜ್ಯ ಮಟ್ಟದ ಅಧಿಕಾರಿಗಳು ಬರುತ್ತಿದ್ದಾರೆ ಎಂದರು.
ಮೂರು ಸಾವಿರಮನೆಗಳಲ್ಲಿ ೬೨೪ ಮನೆ ಹಂಚಿಕೆಯಾಗಿವೆ.೬೪೮ ಮನೆಗಳು ಸಿದ್ಧವಾಗಿವೆ. ೧೭೨೮ ಮನೆ ಪರಿಪೂರ್ಣವಾಗಿ ಆಗಬೇಕಿದೆ. ಮೂಲ ಸೌಕರ್ಯದ ಕೊರೆತೆ ಹಿನ್ನೆಲೆಯಲ್ಲಿ ಮನೆಪಡೆದವರೂ ಇನ್ನೂ ಹೋಗಿಲ್ಲ. ಮೂಲಸೌಕರ್ಯದ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದರು.
ಕೊಳಚೆ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ಕಾಲಕ್ಕೆ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ದೀ ಆಗಬೇಕಿದೆ. ಕೊಳಚೆ ನಿವಾಸಿಗಳ ಸಂಖ್ಯೆಯಲ್ಲಿ ಶಿವಮೊಗ್ಗ ೪ ನೇ ಸ್ಥಾನದಲ್ಲಿದೆ. ಅದನ್ನು ಒಂದನೇ ಸ್ಥಾನಕ್ಕೆ ತರಲಾಗುತ್ತದೆ. ೨೬ ಕೊಳಚೆ ಪ್ರದೇಶಗಳಿಗೆ ಜಿಲ್ಲಾಧಿಕಾರಿಯಿಂದ ಅಧಿಸೂಚನೆಯಾಗಿದೆ. ತೊಡಕುಗಳನ್ನು ಪರಿಹರಿಸುವ ಕೆಲಸ ಸರ್ಕಾರ ದಿಂದಲೇ ಆಗಬೇಕಿದೆ ಎಂದರು.
ಗೋಪಶೆಟ್ಟಿಕೊಪ್ಪದಲ್ಲಿ೧೮೩೬ ಮನೆಗಳ ನಿರ್ಮಾಣ ವಾಗುತ್ತಿವೆ. ಅಲ್ಲಿಯೂ ಕೂಡ ಸಾಕಷ್ಟು ಕೆಲಸ ಬಾಕಿ ಇದೆ. ಮೂಲ ಸೌಕರ್ಯಗಳನ್ನು ಒದಗಿಸಲು ೧೩.೧೧ ಕೋಟಿ ರೂ. ಅಗತ್ಯವಾಗಿ ಬಿಡುಗಡೆ ಆಗಬೇಕಿದೆ. ಈ ಎಲ್ಲಾ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸದನದಲ್ಲಿ ಉತ್ತರವನ್ನು ಪಡೆಯಲಾಗಿದೆ ಎಂದರು.
ಮಳೆ ಹಾನಿಗೆ ಸಂಬಂಧಿಸಿದಂತೆ ಬಿಜೆಪಿ ತಂಡ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದೆ. ೨೨ ನೇ ಸಾಲಿನಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡಲಾಗಿತ್ತು. ೧.೨೦ ಲಕ್ಷ ರೂ. ನೀಡಲಾಗುತ್ತಿತ್ತು. ಯಡಿಯುರಪ್ಪ ಸರ್ಕಾರದ ಲ್ಲಿ ಇದನ್ನು ಹೆಚ್ಚಳ ಮಾಡಲಾಗಿತ್ತು. ಇನ್ನೂ ಬಿಡಿಗಾಸು ಬಂದಿಲ್ಲ. ೨೦೨೩ ರಲ್ಲಿ ಬಿದ್ದ ಮನೆಗಳಿಗೆ ಪರಿಹಾರವನ್ನು ನೀಡಿಲ್ಲ. ಅವರಿಗೂ ಈಗ ಕೊಡಲು ಚಿಂತನೆ ನಡೆಸಲಾಗಿದೆ ಎಂದರು.
ಬಿಜೆಪಿಯಿಂದ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಶಿವಮೊಗ್ಗದಿಂದಲೂ ಕೂಡ ತಂಡ ಹೋಗಲಿದೆ. ಜಿಲ್ಲೆಯಿಂದ ಸುಮಾರು ೩೦೦೦ ಕ್ಕೂ ಹೆಚ್ಚು ಕಾಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ೧೪೦ ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ೮ ದಿನಗಳ ಕಾಲ ನಡೆಯಲಿದೆ ಎಂದರು.
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಕೂಡ ಬೇಗನೆ ಚುನಾವಣೆಯಾಗಬೇಕು ಎಂಬ ಉದ್ದೇಶ ಹೊಂದಿದೆ. ಈ ಬಗ್ಗೆ ಚುನಾವಣಾಧಿಕಾರಿಗಳ ಜೊತೆ ನಮ್ಮ ನಾಯಕರು ಈಗಾಗಲೇ ಮಾತನಾಡಿದ್ದಾರೆ ಎಂದರು.
ಟಿ.ಡಿ.ಮೇಘರಾಜ್, ಮೋಹನ ರೆಡ್ಡಿ, ಶಿವರಾಜ್, ಎನ್.ಕೆ. ಜಗದೀಶ್, ಎನ್.ಜಿ.ನಾಗರಾಜ್, ಮಂಜುನಾಥ್, ದೀನ್ ದಯಾಳ್, ರೇಣುಕಾ ನಾಗರಾಜ್ ಇದ್ದರು.