ಮೊದಲನೆಯ ದಿನ ಭರಣಿ ಕಾವಡಿ | ಎರಡನೆಯ ದಿನ ಆಡಿ ಕೃತ್ತಿಕೆ  ಆಚರಿಸಲಾಗುತ್ತಿದೆ.

          ಶ್ರಾವಣ ಮಾಸದಲ್ಲಿ ಆಡಿಕೃತಿಕೆ  ಅಂಗವಾಗಿ ಹಳದಿ ಉಡುಪು ವಸ್ತ್ರಗಳನ್ನು ತೊಟ್ಟು ಭಕ್ತರು ಹರೋಹರ ಹರೋಹರ ಎಂದು ದೇವರ ನಾಮಸ್ಮರಣೆ ಮಾಡುತ್ತಾ ಗುಂಪು ಗುಂಪಾಗಿ ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದು ಹರಿಕೆ ತೀರಿಸಿದರು.

        ಪುರಾಣ ಪ್ರಸಿದ್ಧ ಆಡಿ ಕೃತ್ತಿಕೆ ಜಾತ್ರೆಗೆ ಶಿವಮೊಗ್ಗ ಸೇರಿದಂತೆ  ರಾಜ್ಯದ ವಿವಿಧ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಜನರು ಬರುತ್ತಾರೆ.  ವಿಜೃಂಭಣೆಯಿಂದ ಜಾತ್ರೆ ನಡೆಸಲಾಗುತ್ತಿದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಆಡಿ ಕೃತ್ತಿಕೆ ಅಂತಲೂ ಆಚರಿಸಲಾಗುತ್ತಿದೆ.

     ತಮಿಳು ಸಮುದಾಯದ ಆರಾಧ್ಯ ದೈವ  ಹಾಗೂ ನಗರದ ಪ್ರಸಿದ್ಧ ಗುಡ್ಡೆಕಲ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜಾತ್ರೆ ಭಾನುವಾರ  ಆರಂಭಗೊಂಡಿತು. ಶ್ರಾವಣ ಮಾಸದ ಭರಣಿ ಹಾಗೂ ಕೃತಿಕಾ ನಕ್ಷತ್ರದಲ್ಲಿ ಆಚರಿಸಲ್ಪಡುವ  ಹಬ್ಬದ ಅಂಗವಾಗಿ ಭಕ್ತರು ನಸುಕಿನ ಜಾವದಿಂದಲೇ  ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಪ್ರಾರ್ಥನೆಗೆ ಹರಕೆ ಹೊತ್ತವರು ಕಾವಡಿ ಹಾಗೂ ಮಂಗಳವಾದ್ಯದೊಂದಿಗೆ ಕುಟುಂಬ ಸಮೇತರಾಗಿ ಬರಿಗಾಲಲ್ಲಿ  ನಡೆದು ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಹರಕೆ ಸಲ್ಲಿಸುವರು.

     ಕೆನ್ನೆ ನಾಲಿಗೆಯನ್ನು ಛೇದಿಸಿದ ತ್ರಿಶೂಲ ಹೊತ್ತವರು,ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡು ತೇರು ಎಳೆಯುವವರು, ನಿಂಬೆಹಣ್ಣನ್ನು ದಾರದಿಂದ ಪೋಣಿಸಿ ಅದನ್ನು ಸೂಜಿ ಮೂಲಕ ಚರ್ಮಕ್ಕೆ ಚುಚ್ಚಿ ಕೊಂಡವರು, ಭುಜದ ಮೇಲೆ ಕಾವಡಿ ಹೊತ್ತು ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹರೋಹರ ಎಂದು ಬಾಲಸುಬ್ರಹ್ಮಣ್ಯನ  ನಾಮ ಸ್ಮರಣೆ ಮಾಡುತ್ತಾ ಪಾದಯಾತ್ರೆಯಲ್ಲಿ ಸಾಲು ಸಾಲಾಗಿ ಬಂದರು. ಇದು ನಗರದ ತುಂಗಾ ನದಿ ದಡದಲ್ಲಿರುವ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ಜಾತ್ರೆಯಲ್ಲಿ ಭಾನುವಾರ ಕಂಡು ಬಂದ ದೃಶ್ಯಾವಳಿ.

     ಭಕ್ತರ ಭಕ್ತಿಯ ಪರಾಕಾಷ್ಟೇ ನೋಡಿದವರಿಗೆ ಮೈ ಜುಮ್ಮೆನಿಸುವಂತಿತ್ತು, ನಿಜವಾಗಲೂ ಇದು ಸಾಧ್ಯವಾ, ಸಣ್ಣ ಮುಳ್ಳು ಚುಚ್ಚಿದರೂ ನೋವಿನಿಂದ ನರಳುವ ಮನುಷ್ಯ ದೇಹದ ಚರ್ಮವನ್ನೇ  ಛೇದಿಸಿ ಅದರಲ್ಲಿ ಅತಿ ಭಾರವನ್ನು ಹೇಗೆ ಹೊರುತ್ತಾನೆ, ಹೇಗೆ ಎಳೆಯುತ್ತಾನೆ ಎಂದು ನೋಡುಗರ ಮನಸ್ಸಿನಲ್ಲಿ ಮೂಡಿಸುತ್ತಿತ್ತು.

       ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ  ಹಾಗೂ ದೀಪಾಲಂಕಾರ ಏರ್ಪಡಿಸಲಾಗಿತ್ತು.ಸಂಜೆ ನಂತರವೂ ಬರುತ್ತಿದ್ದ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹರೋಹರದ ಅಂಗವಾಗಿ ಜಿಲ್ಲೆಯ ನಾನಾ ಭಾಗಗಳಿಂದ ತಮಿಳು ಹಾಗೂ ಇತರ ಸಮುದಾಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಾತ್ರೆಯಿಂದ ಸಂಚಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು,ನಗರದ ಕೆಲ ಶಾಲೆಗೆ ರಜೆ ನೀಡಲಾಗಿದೆ.  ಹೊಳೆ ಹೊನ್ನೂರು  ಮಾರ್ಗವಾಗಿ ಸಂಚರಿಸುವ ವಾಹನಗಳು ಬೇರೆ ಕಡೆಯಿಂದ ಪ್ರಯಾಣಿಸುತ್ತಿವೆ. ಹರಕೆ ಹೊತ್ತವರು ಪಾದಯಾತ್ರೆಯಲ್ಲಿ ಬಂದರೆ,ಕೆಲವರು ದ್ವಿಚಕ್ರ ವಾಹನ, ಕಾರು, ಟ್ಯಾಕ್ಟರ್,ಬಸ್ಸುಗಳಲ್ಲಿ  ಬಂದರು, ಜಾತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    ಸೋಮವಾರ ಆಡಿಕೃತ್ತಿಕೆ ಹಿನ್ನೆಲೆಯಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಹಾಗೂ ಹರಕೆ ಸಲ್ಲಿಸಲಿದ್ದಾರೆ.ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನ ಸಮಿತಿಯು ಭಕ್ತರಿಗೆ ಅನ್ನ ಸಂತರ್ಪಣೆಯನ್ನು  ಏರ್ಪಡಿಸಿದೆ.      

      ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

ಕಾವಡಿ ವಿಶೇಷ:

    ಒಂದು ಬಿದಿರಿನ ಕೋಲು ಹಾಗೂ ಎರಡು ಬಿದಿರಿನ ಬುಟ್ಟಿಯೇ ಕಾವಡಿ. ಒಂದು ಬುಟ್ಟಿಗೆ ಅರಿಸಿನ ಬಟ್ಟೆಯನ್ನು ಸುತ್ತಿರುತ್ತಾರೆ. ಅದರಲ್ಲಿ ದೇವರ ಪೂಜೆಯ ಸಾಮಾನನ್ನು ಇಟ್ಟಿರುತ್ತಾರೆ. ಇನ್ನೊಂದು ಬುಟ್ಟಿಯಲ್ಲಿ ಸುಬ್ರಹ್ಮಣ್ಯನಿಗೆ ನೈವೇದ್ಯ ಮಾಡಲು ತಯಾರಿಸಿದ ಪ್ರಸಾದ ಇಟ್ಟಿರುತ್ತಾರೆ. ಬಿದಿರ ಕೋಲಿನ ಕೊನೆಯಲ್ಲಿ ಈ ಎರಡನ್ನು ಅರಸಿನ ಹಗ್ಗದಲ್ಲಿ ಕಟ್ಟಿ ತಕ್ಕಡಿ ರೀತಿ ನೇತು ಹಾಕಿರುತ್ತಾರೆ. ಇದಕ್ಕೆ ಹಳದಿ ಹೂವಿನಿಂದ ಅಲಂಕಾರ ಮಾಡಿರುತ್ತಾರೆ. ಸುಬ್ರಹ್ಮಣ್ಯನ ಹರಕೆ ಹೊತ್ತವರು ಈ ಹಬ್ಬದ ದಿನ ಆ ಕಾವಡಿಯನ್ನು ಹೊತ್ತು ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗುತ್ತಾರೆ. ಈ ಕಾವಡಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿರುತ್ತಾರೆ. ಹೂವುಗಳಿಂದ ಅಲಂಕರಿಸಿದ ಕಾವಡಿ,ಆಡಿಕೃತ್ತಿಕೆ  ಜಾತ್ರೆಯಲ್ಲಿ ಕಾವಡಿ ಹೊತ್ತು ಬರುವ ಭಕ್ತರು ಜನಾಕರ್ಷಣೆಗೆ ಒಳಗಾಗಿದ್ದರು, ಜಾತ್ರೆಯ ಲಕ್ಷಾಂತರ ಜನ ಸೇರಿದರೆ,ಅವರಲ್ಲಿ ನವಿಲು ಕಾವಡಿ,ಅರಮನೆ ಕಾವಡಿ, ಎಳೆ ನೀರು ಕಾವಡಿ, ಜೇನುತುಪ್ಪ ಕಾವಡಿ, ಹಾಲು ಕಾವಡಿ, ಮತ್ತು ಪುಷ್ಪ ಕಾವಡಿ ಹೊತ್ತು ಬರುವವರೆ ಸಾವಿರಾರು ಮಂದಿ ಇದ್ದರು. ಇನ್ನು ಕೆಲವರು ದೇಹ ದಂಡಿಸುವಂತಹ, ನೋವುಂಟು ಮಾಡುವಂತಹ ಹರಕೆಗಳಲ್ಲಿ ನಾಲಿಗೆಗೆ ಬೆಳ್ಳಿ ಅಥವಾ ಕಬ್ಬಿಣದ ತ್ರಿಶೂಲ, ಕೆನ್ನೆಗೆ 3 ರಿಂದ 15 ಅಡಿ ಉದ್ದದ,2 ರಿಂದ 15 ಕೆಜಿ ತೂಕದ ಕಬ್ಬಿಣದ  ಚುಚ್ಚಿ ಕೊಂಡವರು, ಶ್ರೀ ಬಾಲಸುಬ್ರಮಣ್ಯ ದೇವರನ್ನು ಹೊತ್ತು ಸಣ್ಣತೇರನ್ನು ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡವರು, ನಿಂಬೆ ಹಣ್ಣನ್ನು ಸೂಜಿಯಿಂದ ಚರ್ಮಕ್ಕೆ ಪೋಣಿಸಿಕೊಂಡವರು ಇದ್ದರು. ಕಾವಡಿ ಹೊತ್ತು ಹರಕೆ ತೀರಿಸಿದವರಲ್ಲಿ ಚಿಕ್ಕ ಮಕ್ಕಳಿಂದ ವಯೋ ವೃದ್ಧರು  ಇದ್ದರು.

ಹರಕೆಯ ಆಚರಣೆ:

    ಶ್ರಾವಣ ಮಾಸದಲ್ಲಿ ಒಂದು ತಿಂಗಳು ಈ ವ್ರತವನ್ನು ಆಚರಿಸಿ ಕಾವಡಿ ಹಬ್ಬದ (ಕೃತ್ತಿಕಾ ನಕ್ಷತ್ರದ) ದಿನ ಮಹಿಳೆಯರು ಅರಿಸಿನ ಸೀರೆ ಧರಿಸಿ, ಪುರುಷರು ಅರಿಶಿಣ ಬಣ್ಣದ ಪಂಚೆಯನ್ನು ಧರಿಸಿ ಮಡಿಯಿಂದ ಆ ಕಾವಡಿಯನ್ನು ಹೆಗಲ ಮೇಲೆ ಹೊತ್ತು ವಿಶೇಷ ವಾದ್ಯಗಳೊಂದಿಗೆ ಮನೆಯಿಂದ ಹೊರಡುತ್ತಾರೆ. ಹೋಗುವಾಗ ಕುಣಿಯುತ್ತಾ ‘ಹರೋ ಹರ… ಹರೋ ಹರ…’ ಎಂದು ಸುಬ್ರಹ್ಮಣ್ಯನನ್ನು ನೆನೆಯುತ್ತಾ ಸಾಗುತ್ತಾರೆ.  ಒಂದು ಸಲ ಕಾವಡಿ ಹೊತ್ತುಕೊಂಡರೆ ಅದನ್ನು ಸುಬ್ರಹ್ಮಣ್ಯ ದೇವಾಲಯದ ತನಕ ಹೊತ್ತು ಕೊಂಡಿರಬೇಕು. ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹರಕೆಯನ್ನು ತೀರಿಸಿದ ನಂತರ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಿ ವ್ರತವನ್ನು ಪೂರ್ತಿಗೊಳಿಸಲಾಗುತ್ತದೆ

By admin

ನಿಮ್ಮದೊಂದು ಉತ್ತರ

You missed

error: Content is protected !!