ಸಾಗರ: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ವರದಪುರದ ಶ್ರೀ ಶ್ರೀಧರಾಶ್ರಮ ಪ್ರವೇಶಕ್ಕೆ ಭಕ್ತರಿಗೆ ಹೇರಲಾಗಿದ್ದ ನಿಷೇಧವನ್ನು ಆಡಳಿತ ಮಂಡಳಿ ಕೊಂಚ ಸಡಿಲಗೊಳಿಸಿದ್ದು, ಪ್ರತಿದಿನ ಎರಡೂವರೆ ಗಂಟೆಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಶ್ರೀ ಶ್ರೀಧರ ಸೇವಾ ಮಹಾಮಂಡಲದ ವತಿಯಿಂದ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯಾನುಸಾರವಾಗಿ ಜ.25ರ ಸೋಮವಾರ ಮಧ್ಯಾಹ್ನ 2.30 ನಿಮಿಷಕ್ಕೆ ಶ್ರೀ ಕ್ಷೇತ್ರ ವರದಪುರದಲ್ಲಿ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳವರ ಸನ್ನಿಧಾನದ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದಿದ್ದಾರೆ.
ಮಧ್ಯಾಹ್ನ 2.30 ರಿಂದ 5.00 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ 5.00 ಗಂಟೆಯ ನಂತರ ಶ್ರೀ ಆಶ್ರಮದ ಪರಿಸರದಲ್ಲಿ ಆಶ್ರಮದ ಸಿಬ್ಬಂದಿಗಳ ಮತ್ತು ಆಶ್ರಮವಾಸಿಗಳ ವಿನಾ ಸಾರ್ವಜನಿಕರ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ.
ದರ್ಶನ ಪಡೆಯುವ ಭಕ್ತರು ಈ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕಾಗಿರುತ್ತದೆ.

  1. 60 ವರ್ಷದ ಮೇಲ್ಪಟ್ಟವರು ಮತ್ತು 10 ವರ್ಷದ ಒಳಗಿನವರಿಗೆ ಶ್ರೀ ಆಶ್ರಮದ ಪ್ರವೇಶವನ್ನು ನಿರ್ಬಂಧಿಸಲಾಗಿದೆ
  2. ಶ್ರೀ ಆಶ್ರಮಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕು
  3. ಶ್ರೀ ಭಗವಾನರ ದರ್ಶನ ಮಾಡಲು ಹೋಗುವಾಗ ಶ್ರೀ ಶ್ರೀಧರ ತೀರ್ಥದಲ್ಲಿ ಕೈ ಕಾಲು ಮುಖವನ್ನು ತೊಳೆಯಲು ಮಾತ್ರ ಅವಕಾಶವಿರುತ್ತದೆ. ಸದ್ಯ ತೀರ್ಥ ಸ್ನಾನಕ್ಕೆ ಅವಕಾಶವಿರುವುದಿಲ್ಲ
  4. ಶ್ರೀ ಭಗವಾನರ ಸನ್ನಿಧಾನ ಮಂದಿರದ ಒಳಗೆ ಪ್ರವೇಶವಿರುವುದಿಲ್ಲ. ಶ್ರೀಮಂದಿರದ ಹೊರಗಿನಿಂದಲೇ ಶ್ರೀ ಭಗವಾನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂದಿರದ ಸುತ್ತು ಪ್ರದಕ್ಷಿಣೆ, ಕುಳಿತುಕೊಳ್ಳುವುದು, ಭಜನೆ,ಸಂಗೀತ, ಜಪಾನುಷ್ಠಾನಗಳನ್ನು ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಭಕ್ತಾದಿಗಳು ದರ್ಶನವನ್ನು ಮಾಡಿಕೊಂಡು ಹೋಗತಕ್ಕದ್ದು
  5. ಕೇಂದ್ರ ಸರ್ಕಾರದ ಆದೇಶದಂತೆ ತೀರ್ಥ ಪ್ರಸಾದ ಮಂತ್ರಾಕ್ಷತೆ ವಿನಿಯೋಗ, ಕಾಯಿ ಒಡೆಯುವುದು ಇವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ
  6. ವಸತಿ ಮುಂತಾದ ವ್ಯವಸ್ಥೆಗಳು ಇರುವುದಿಲ್ಲ
  7. ಆಶ್ರಮದಲ್ಲಿರುವ ಕಾರ್ಯಲಯದ ಸೇವೆಗಳು ಲಭ್ಯವಿರುವುದಿಲ್ಲ
  8. ನಿಮ್ಮ ಪಾದರಕ್ಷೆ ಮುಂತಾದ ವಸ್ತುಗಳನ್ನು ನಿಮ್ಮ ವಾಹನಗಳಲ್ಲೆ ಇಡತಕ್ಕದ್ದು
  9. ಆಶ್ರಮದ ಆವರಣದಲ್ಲಿ ವಾಹನ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ
  10. ಆಶ್ರಮಕ್ಕೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು
  11. ಆರೋಗ್ಯ ಸೇತು ಆಪ್ ಹೊಂದಿರತಕ್ಕದ್ದು
  12. ಆಧಾರ ಕಾರ್ಡ್ ತರತಕ್ಕದ್ದು
  13. ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು

By admin

ನಿಮ್ಮದೊಂದು ಉತ್ತರ

error: Content is protected !!