ಶಿವಮೊಗ್ಗ ಜೂ.೨೨: ಎಲ್‌ಬಿಎಸ್ ನಗರದ ಎರಡನೇ ತಿರುವಿನಲ್ಲಿರುವ ಆರ್ಯ ವಿಜ್ಞಾನ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಜೂ.೨೬ರಂದು ಬೆಳಿಗ್ಗೆ ೯.೩೦ಕ್ಕೆ ಶೃಂಗೇರಿ ಶ್ರೀಗಳಾದ ಜಗದ್ಗುರು ಶ್ರೀ ವಿಧುಶೇಖರಭಾರತೀರವರು ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.


ಅವರು ಇಂದು ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರಕ್ಕೆ ವಿಜ್ಞಾನ ಪಿಯು ಕಾಲೇಜಿನ ಅವಶ್ಯಕತೆಯನ್ನು ಮನಗಂಡು ಎಲ್ಲಾ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಕಾಲೇಜನ್ನು ಈ ವರ್ಷದಿಂದಲೇ ಆರಂಭಿಸಲಾಗಿದೆ. ಕಾಲೇಜಿನ ಕಟ್ಟಡದ ಉದ್ಘಾಟನೆ ಜೂ. ೨೬ರ ಬೆಳಿಗ್ಗೆ ನಡೆಯಲಿದೆ ಎಂದರು.


ಸಾಮಾನ್ಯವಾಗಿ ಸಾರ್ವಜನಿಕರು ಶೃಂಗೇರಿ ಶ್ರೀಕ್ಷೇತ್ರಕ್ಕೆ ಹೋಗಿ ಮಕ್ಕಳ ಮೊದಲ ಅಕ್ಷರಾಭ್ಯಾಸಕ್ಕೆ ಅಣಿಯಾಗುತ್ತಾರೆ. ಶೃಂಗೇರಿ ಶ್ರೀಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಬುದ್ಧಿವಂತರಾಗುತ್ತಾರೆ ಎಂಬ ಮಾತಿದೆ. ಈ ಹಿನ್ನಲೆಯಲ್ಲಿ ಶೃಂಗೇರಿ ಶ್ರೀಗಳನ್ನು ನಮ್ಮ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಉದ್ಘಾಟನೆಯ ದಿನ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದರು.


ಶ್ರೀಗಳಿಂದ ಸರಸ್ವತಿ ಪೂಜೆ ನಡೆಸಲಾಗುವುದು. ಬಳಿಕ ಧೂಳಿ ಪೂಜೆ ನೆರವೇರಿಸಲಾಗುವುದು ಅನಂತರ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳು ಅಲ್ಲಿ ಆಶೀರ್ವಚನ ನೀಡಿ, ಭಕ್ತರಿಗೆ ಫಲಮಂತ್ರಾಕ್ಷತೆ ನೀಡುವರು ಎಂದರು.


ಕಾರ್ಯಕ್ರಮದಲ್ಲಿ ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮದರ್ಶಿಗಳಾದ ಡಾ.ಪಿ.ನಾರಾಯಣ್, ಶಾಸಕರಾದ ಎಸ್. ಎನ್.ಚನ್ನಬಸಪ್ಪ, ಡಾ.ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದರು.


ಆರ್ಯ ಪಿಯು ಕಾಲೇಜಿನಲ್ಲಿ ಈಗಾಗಲೇ ೧೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ೧೦ ಕ್ಲಾಸ್ ರೂಮ್‌ಗಳಿವೆ, ೩ ಸುಸಜ್ಜಿತ ಲ್ಯಾಬ್‌ಗಳಿವೆ ಪಿಯು ಪಾಠದ ಜೊತೆ ಜೊತೆಗೆಯೇ ನೀಟ್, ಜೆಇಇ ಪರೀಕ್ಷೆಗೂ ತರಬೇತಿ ನೀಡಲಾಗುವುದು. ಉತ್ತಮ ಉಪನ್ಯಾಸಕ ವರ್ಗದವರಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಖಜಾಂಚಿ ಬಿ.ಜೆ.ಸುನೀತಾ ದೇವಿ, ಉಪನ್ಯಾಸಕರಾದ ಕಣ್ಣನ್, ಪ್ರಕಾಶ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!