ಶಿವಮೊಗ್ಗ, ಮೇ.೨೮:
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಸಮಿತಿ ಪುನರ್ ರಚನೆಯಾಗಿದ್ದು, ಹಾಗೂ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಿ. ಹೆಚ್.ಎಸ್. ರುದ್ರಪ್ಪ ಅವರ ನೆನಪು ಕಾರ್ಯಕ್ರಮ ವನ್ನು ಜೂ.೧೯ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್ ನಲ್ಲಿ ಆಯೋಜಿಸಲಾಗಿದೆ ಎಂದು ನೂತನ ಜಿಲ್ಲಾಧ್ಯಕ್ಷ ಮಂಜುನಾಥ್ ಆರೇಕೊಪ್ಪ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಶಿವಮೊಗ್ಗ ಜಿಲ್ಲೆಯಲ್ಲಿ ಸಂಘವನ್ನು ಬಲಿಷ್ಠಗೊಳಿಸುವ ಮತ್ತು ಹಲವು ಚಳವಳಿಗಳನ್ನು ಮಾಡುವ ಉದ್ದೇಶದಿಂದ ಜಿಲ್ಲಾ ಸಮಿತಿಯನ್ನು
ಪುನರ್ ರಚಿಸಿದ್ದಾರೆ ಎಂದರು.
ಜಿಲ್ಲಾ ಗೌರವಾಧ್ಯಕ್ಷರಾಗಿ ಸೈಯದ್ ಶಫೀವುಲ್ಲಾ, ವೀರಭದ್ರೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅಮೃತ್ ರಾಜ್, ಉಪಾಧ್ಯಕ್ಷರಾಗಿ ಬಸವರಾಜ್ ಬನ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಪಿ. ಸತೀಶ್, ಕಾರ್ಯದರ್ಶಿಯಾಗಿ ನಾಗರಾಜ್, ಸಂಚಾಲಕರಾಗಿ ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್, ಸೋಮಶೇಖರ್ ಸಿಗ್ಗ, ಸಂಘಟನಾ ಕಾರ್ಯದರ್ಶಿ ಯಾಗಿ ಬಸವರಾಜ್ ಆರೇಕೊಪ್ಪ, ಮಹಿಳಾ ಸಂಚಾಲಕಿಯಾಗಿ ಸುಮಿತ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಕಾರ್ಯದರ್ಶಿ ನಾಗರಾಜ್ ಮಾತನಾಡಿ, ರೈತಸಂಘ ಮತ್ತು ಹಸಿರುಸೇನೆಯನ್ನು ಗ್ರಾಮಮಟ್ಟದಿಂದ ಸಂಘಟಿಸಿ ಬಲಪಡಿಸಲಾಗುವುದು ಹಾಗೂ ಇತರೆ ಜಿಲ್ಲೆಗಳಲ್ಲೂ ಸಹ ಸಂಘಟಿಸಲಾಗುವುದು. ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರವನ್ನು ಉಚಿತವಾಗಿ
ಸಿಗುವಂತಾಗಬೇಕು.ಬರ ಪರಿಹಾರವನ್ನು ಕೂಡಲೇ ವಿತರಿಸಬೇಕು ಹಾಗೂ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಶಫೀವುಲ್ಲಾ, ವೀರಭದ್ರೇಗೌಡ, ಅಮೃತ್ ರಾಜ್, ಬಸವರಾಜ್ ಬನ್ನೂರ್, ಹೆಚ್.ಪಿ. ಸತೀಶ್, ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್, ಸೋಮಶೇಖರ್ ಸಿಗ್ಗ, ಬಸವರಾಜ್ ಆರೇಕೊಪ್ಪ, ಸುಮಿತ್ರಾ ಉಪಸ್ಥಿತರಿದ್ದರು.