ಶಿವಮೊಗ್ಗ: ನಿಧಿ ಆಸೆಗಾಗಿ 7 ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ದಾರುಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಬಾಲಾಜಿ ರಾವ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 7 ವರ್ಷದ ಬಾಲಕಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದವರಾಗಿದ್ದು, ಮಡಿವಾಳ ಜಾತಿಯ ರಾಘು ಮಡಿವಾಳರ ಪುತ್ರಿಯಾಗಿದ್ದಾಳೆ. ನಿಧಿಯ ಆಸೆಗಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯಿಂದ ಬಾಲಕಿಯ ಪೋಷಕರಲ್ಲದೇ, ಇಡೀ ಕಿನ್ನಾಳ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆತಂಕಗೊಂಡಿದ್ದಾರೆ. ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಮತ್ತು ಭಯಾನಕ ಕೃತ್ಯವಾಗಿದೆ ಎಂದರು.

ಹತ್ಯೆಯಾದ ಬಾಲಕಿ ಏ. 19 ರಂದು ಮನೆಯಿಂದ ಆಟವಾಡಲು ಹೋಗಿದ್ದಳು. ಪುನಃ ವಾಪಸ್ ಬರಲಿಲ್ಲ. ಇಡೀ ಗ್ರಾಮದವರು ಹುಡುಕಿದಾಗ ಕೊನೆಗೆ ಹೆಣವಾಗಿ ಸಿಕ್ಕಿದ್ದಾರೆ. ಇವಳನ್ನು ಹತ್ಯೆಗೈದ ಪಾಪಿಷ್ಟರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟಿದ್ದಾರೆ. ನಂತರ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ ಎಂದರು.

ಈಗಾಗಲೇ ಹಂತಕರನ್ನು ಬಂಧಿಸುವಂತೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇ-ಮೇಲ್ ಸಂದೇಶ ಕೂಡ ಕಳಿಸಲಾಗಿದೆ. ಘಟನೆಯ ವಿವರ ತಿಳಿಸಲಾಗಿದೆ. ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಾಲಕಿ ಹತ್ಯೆ ವಿರುದ್ಧ ಇಡೀ ರಾಜ್ಯದಾದ್ಯಂತ ಮಡಿವಾಳ ಸಮಾಜ ಪ್ರತಿಭಟನೆ ಕೂಡ ಮಾಡುತ್ತಿದೆ ಎಂದರು.

ಸಮಾಜದ ಮುಖಂಡ ಜೆ. ಹಿರಣ್ಣಯ್ಯ ಮಾತನಾಡಿ, ನಮ್ಮ ಮಡಿವಾಳ ಸಮಾಜ ತುಂಬಾ ಸಣ್ಣದು. ನಮ್ಮ ಸಮಾಜದ ಧ್ವನಿಯನ್ನು ಸರ್ಕಾರ ಆಲಿಸಬೇಕಾಗಿದೆ. ಮಡಿವಾಳ ಸಮಾಜದ ಮಗು ಎಂದೇನಲ್ಲ. ಇದು ನಾಗರಿಕ ಸಮಾಜದ ನಿದ್ದೆಯನ್ನೇ ಕೆಡಿಸಿದೆ. ಸಂಪೂರ್ಣ ತನಿಖೆಯಾದಾಗ ಮಾತ್ರ ಸತ್ಯ ಹೊರ ಬರುತ್ತದೆ. ಆದ್ದರಿಂದ ಈ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಪ್ರಮೋದ್ ಎನ್.ಕೆ., ಮಂಜಪ್ಪ ಎಂ., ಮೈಲಾರಿ, ಮಂಜುನಾಥ್ ಎನ್., ಗುರುಮೂರ್ತಿ ಟಿ.ಎಸ್. ಇದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!