ಶಿವಮೊಗ್ಗ,ಏ.23: ನನ್ನ ಉಚ್ಚಾಟನೆ ತಾತ್ಕಲಿಕ ನನ್ನ ಗೆಲುವು ನಿಶ್ಚಿತ ಗೆದ್ದ ಮೇಲೆ ಬಿಜೆಪಿ ಸೇರುವುದು ಸತ್ಯ ಎಂದು ಮಾಜಿ ಸಚಿವ, ಲೋಕಸಭಾ ಸ್ವತಂತ್ರ್ಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಪುನರುಚ್ಛರಿಸಿದರು.
ಬಿಜೆಪಿಯಿಂದ ನನ್ನ ಉಚ್ಚಾಟನೆ ಬಳಿಕ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿರುವುದರಿಂದ ಇದೇ ಅಪ್ಪ ಮಕ್ಕಳು ನನ್ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಪಕ್ಷ ಬಿಟ್ಟು ಕಾಂಗ್ರೆಸ್‍ಗೆ ಸೇರಿದ ಜಗದೀಶ್ ಶೆಟ್ಟರ್ ಅವರನ್ನೇ ಅವರ ಕಾಲಿಗೆ ಬಿದ್ದು, ವಾಪಾಸ್ಸು ಕರೆಸಿಕೊಂಡು ಅವರಿಗೆ ಟಿಕೇಟ್ ಕೊಟ್ಟು ಬಿಜೆಪಿಗೆ ಸೇರಿದಿಕೊಂಡಿದ್ದಾರೆ.ನಾನು ಆಗೇನು ಮಾಡಿಲ್ಲವಲ್ಲ. ನನಗೆ ಬಿಜೆಪಿಗೆ ತಾಯಿ ಇದ್ದಂತೆ ಎಂದರು.
40 ವರ್ಷಗಳ ಕಾಲದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದು ನೀವು, ನಿಮಗೆ ಉಚ್ಚಾಟನೆ ಎಂದು ಅನೇಕ ಹಿರಿಯರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಅನೇಕರು ನಿಮಗೆ ಅನ್ಯಾಯವಾಗಿದೆ, ನಿಮ್ಮ ಜೊತೆ ನಾವಿದ್ದೇವೆ ಎಂದು ಕರೆ ಮಾಡಿ ತಿಳಿಸುತ್ತಿದ್ದಾರೆ. ದಿನೇ ದಿನೇ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದರು.
ಇದೇ ವಿಜಯೇಂದ್ರ, ರಾಘವೇಂದ್ರ ಅವರು ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಪದೇ ಪದೇ ಹೇಳುತ್ತಾ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದರು. ಈಗ ಪಕ್ಷದಿಂದ ಉಚ್ಚಾಟನೆ ಆಗಿದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ಹಿನ್ನೆಲೆ ಇತರೆ ಪಕ್ಷದ ಅನೇಕರು ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಹೊಸನಗರ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಇತರೆ ಪಕ್ಷದ ಪ್ರಮುಖರು ರಾಷ್ಟ್ರ ಭಕ್ತರ ಬಳಗ ಸೇರ್ಪಡೆಯಾಗಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲೂ ಕೂಡ ಅನೇಕ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಅಪ್ಪನ ಬೆಂಬಲದಿಂದ ರಾಜ್ಯಾಧ್ಯಕ್ಷನಾಗಿರುವ ಎಳೆಸು ವಿಜಯೇಂದ್ರ ನಿಮ್ಮನ್ನು ಪಕ್ಷದಿಂದ ಹೊರಹಾಕಿದ್ದಾನೆ. ನಿಮಗೆ ಅನ್ಯಾಯವಾಗಿ ಎಂದು ಕಾರ್ಯಕರ್ತರು ನೋವಿನಿಂದ ಕರೆ ಮಾಡುತ್ತಿದ್ದಾರೆ. ಈ ಅಪ್ಪ-ಮಕ್ಕಳಿಂದ ಈಶ್ವರಪ್ಪ ಹಾಗೂ ಹಿಂದುತ್ವಕ್ಕೆ ಅನ್ಯಾಯವಾಗಿದೆ.ಹೀಗಾಗಿ ಪ್ರತಿ ಬೂತ್‍ನಲ್ಲೂ ಈಶ್ವರಪ್ಪ ಅವರಿಗೆ ಮತ ಕೊಡಬೇಕು ಎಂದು ಜನರೇ ತೀರ್ಮಾನ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಇಲ್ಲಿ ರಾಘವೇಂದ್ರ ಮನೆಗೆ ಹೋಗುತ್ತಾರೆ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ. ಪಕ್ಷದ ಅಪ್ಪ-ಮಕ್ಕಳ ಕೈಯಿಂದ ಮುಕ್ತವಾಗುತ್ತದೆ ಎಂದು ಖಾರವಾಗಿ ಹೇಳಿದರು.
ರೈತ ಚಿಹ್ನೆ ಸಿಕ್ಕಿದ್ದು ನನ್ನ ಪುಣ್ಯ: ಲೋಕಸಭಾ ಚುನಾವಣೆಗೆ ನನಗೆ ರೈತನ ಚಿಹ್ನೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ. ನಿಮಗೆ ಇಂತ ಒಳ್ಳೆ ಚಿಹ್ನೆ ಸಿಕ್ಕಿದೆ ಎಂದು ಅನೇಕರು ಚಿಹ್ನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಭದ್ರಾವತಿಯಲ್ಲಿ ಹಿಂದುತ್ವವಾದಿ ಯುವಕರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗಲಿದ್ದಾರೆ. ಬೈಂದೂರಿನಲ್ಲಿ ಮೀನುಗಾರರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲಾ ವರ್ಗದ ಜನತೆ ನನಗೆ ಬೆಂಬಲ ನೀಡುತ್ತಿದ್ದು, ಗೆದ್ದ ಬಳಿಕ ಅವರ ಅಪೇಕ್ಷೆಗೆ ತಕ್ಕಂತೆ ಸಂಘಟನೆ ಕಟ್ಟುತ್ತೇನೆ. ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ವಿಜಯೇಂದ್ರ ಕುಂಕುಮ ಅಳಿಸಿ ಹಾಕಿದ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ನೀತಿ ನಿಯಮ ಇಲ್ಲದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಅಪ್ಪ ಮಕ್ಕಳು ಹೊಂದಾಣಿಕೆ ಮಾಡಿಕೊಂಡು 60 ಸಾವಿರದಿಂದ 10 ಸಾವಿರಕ್ಕೆ ಲೀಡ್‍ಗೆ ಇಳಿದಿದ್ದಾರೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಟಿಪ್ಪು ಸುಲ್ತಾನನ ಟೋಪಿ ಹಾಕಿದ್ದನ್ನು ನೋಡಿದ್ದೇವೆ. ವಿಜಯೇಂದ್ರ ಅವರು ಯಾವಾಗ ಬೇಕಾದರೂ ಕುಂಕುಮ ತೆಗೆಯುತ್ತಾರೆ. ಯಾವಾಗ ಬೇಕಾದರೂ ಹಚ್ಚಿಕೊಳ್ಳುತ್ತಾರೆ. ಅದೇ ರೀತಿ ಶಿವರಾಜಕುಮಾರ್, ಗೀತಾ ಕುಂಕುಮ ಅಳಿಸಿ ಹಾಕಿದ್ದನ್ನು ಪ್ರಶ್ನೆ ಮಾಡುತ್ತೇನೆ. ಇವರೆಲ್ಲರೂ ಹಿಂದೂ ಸಮಾಜದ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮೋದಿ ಟೀಕೆ ಮಾಡಿದರೆ ಸಿಗೋದು ಚೊಂಬೇ:
ಮೋದಿಯನ್ನು ಕಾಂಗ್ರೆಸ್ಸಿಗರು ಟೀಕೆ ಮಾಡಿದರೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಅವರಿಗೆ ಸಿಗುವುದು ಚೊಂಬು. ತಾಳಿ ಪವಿತ್ರವಾದ ಹಿಂದೂ ಮಹಿಳೆಯರ ಸಂಕೇತ. ಮೋದಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ ಯತೀಂದ್ರ ಸಿದ್ದರಾಮಯ್ಯ ಯಾಕೆ ಹೇಳಿದ್ದಾರೋ ಗೋತ್ತಿಲ್ಲ. ಮೋದಿ ಹೇಳಿಕೆ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭ ವಾಟಗೋಡು ಸುರೇಶ್ ನೇತೃತ್ವದಲ್ಲಿ ಹೊಸನಗರ ತಾಲೂಕು ಅನೇಕ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ಸಂಖ್ಯೆ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗವನ್ನು ಸೇರ್ಪಡೆಗೊಂಡರು. ಇದೇ ವೇಳೆ ಕೆ.ಎಸ್.ಈಶ್ವರಪ್ಪ ಅವರ ಚುನಾವಣೆ ಸ್ಪರ್ಧೆಯ ಚಿಹ್ನೆ ಹಾಗೂ ಕ್ರಮ ಸಂಖ್ಯೆವುಳ್ಳ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ವಾಟಗೋಡು ಸುರೇಶ್, ಅರಿದ್ರಾವತಿ ಗ್ರಾಪಂನ ಮಾಜಿ ಅಧ್ಯಕ್ಷೆ ಲೀಲಾವತಿ, ಗ್ರಾಪಂ ಮಾಜಿ ಸದಸ್ಯರಾದ ನಳೀನ ರಾವ್, ಭಗೀರಥ ಭಟ್, ಕಲ್ಕಿ ಮಹೇಶ್, ಕುಬ್ಳೆ ಅಶೋಕ್, ಎಚ್.ಮಂಜಪ್ಪ, ಡಾಕಪ್ಪ, ಎ.ಕೆ.ಭದ್ರಪ್ಪ, ನಾಗೇಂದ್ರ, ಗೋಪಾಲಗೌಡ, ದ್ವಾರಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.