ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭವು ಕಾಚಿನಕಟ್ಟೆ ಗ್ರಾಮದಲ್ಲಿ ನೆರವೇರಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಎ ಎಲ್ ಮಂಜುನಾಥ್ ಅವರು ಮಾತನಾಡಿ, ” ಜೀವನದ ಪ್ರತಿ ಹಂತದಲ್ಲಿಯೂ ಕಲಿಕೆ ಇರುತ್ತದೆ. ಒಂದಲ್ಲ ಒಂದು ವಿಷಯ ಸಂಗತಿಗಳನ್ನು ಕಲಿಯುತ್ತಲೇ ನಾವು ಬೆಳೆಯುತ್ತೇವೆ. ಓದು -ಬರಹ ಮಾತ್ರ ಶಿಕ್ಷಣವಲ್ಲ. ಈ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎನ್ನುವುದನ್ನು ಕಲಿಯುವುದೇ ಶಿಕ್ಷಣ. ತಂದೆ ತಾಯಿ ಗುರು ಈ ಶಿಕ್ಷಣಕ್ಕೆ ಮಾರ್ಗದರ್ಶಕರು. ಕಾಲೇಜು ಹಂತಕ್ಕೆ ಬಂದಾಗ ನಮಗೆ ಜೀವನ ಶಿಕ್ಷಣ ಕಲಿಕೆಯು ಎನ್ಎಸ್ಎಸ್ ನ ಮೂಲಕವೇ ಆರಂಭಗೊಳ್ಳುತ್ತದೆ. ಶಾಲಾ ಕಾಲೇಜು ಶಿಕ್ಷಣವು ಕಲಿಸಲಾಗದ ಎಷ್ಟೋ ವಿಷಯಗಳನ್ನು ಎನ್ಎಸ್ಎಸ್ ಕಲಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ತರಬೇತಿಯನ್ನು ಇದರ ಜೊತೆಗೆ ವಿದ್ಯಾರ್ಥಿಗಳು ಕಲಿಯಬೇಕಾಗಿದೆ ” ಎಂದರು.
ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಲು ಆಗಮಿಸಿದ ಸಹ್ಯಾದ್ರಿ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಗೌಡರ್ ಶಿವಣ್ಣನವರ್, ” ನಮ್ಮ ಜೀವನಕ್ಕೆ ಎಷ್ಟೋ ಉತ್ತಮ ಅವಕಾಶಗಳು ಎನ್ ಎಸ್ ಎಸ್ ನಿಂದ ದೊರೆಯುತ್ತದೆ. ಸಹಬಾಳ್ವೆ ಸಹೃದಯತೆಯಿಂದ ಕೂಡಿ ಬದುಕುವ ಜೀವನ ಕಲೆಯನ್ನು ನಾವು ಇಲ್ಲಿ ಕಲಿಯುತ್ತೇವೆ. ಪರಸ್ಪರರನ್ನು ಅರ್ಥೈಸಿಕೊಂಡು ಬದುಕುವ ಬದುಕು ನಮ್ಮದು. ಯಾವುದೇ ಜಾತಿ ಮತ ಲಿಂಗಭೇದಗಳ ಹಂಗಿಲ್ಲದೆ ಸಮೂಹ ಜೀವನದ ಬದುಕನ್ನು ನಾವಿಲ್ಲಿ ಸಾಧಿಸುತ್ತೇವೆ.ಹಾಡು ನೃತ್ಯ ಸಂಗೀತ ಸಾಹಿತ್ಯ ಸಂಸ್ಕೃತಿ ನಡವಳಿಕೆಯ ಅತ್ಯುತ್ತಮ ಮಾದರಿಯನ್ನು ಅನುಸರಿಸುತ್ತೇವೆ. ” ಎಂದರು.
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆಯವರು ” ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ, ಅರಿವು, ಪ್ಲಾಸ್ಟಿಕ್ ವಿರೋಧಿ ಧೋರಣೆಗಳನ್ನು ಬೆಳೆಸುವ ಮಹತ್ತರವಾದ ಆಶಯವನ್ನು ರಾಷ್ಟ್ರೀಯ ಸೇವಾ ಯೋಜನೆಯು ನಿರಂತರವಾಗಿ ಮುನ್ನೆಡೆಸಿಕೊಂಡು ಬಂದಿದೆ. ಸ್ವಯಂಸೇವಕರು ನಿಷ್ಠೆಯಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಚಾರ್ಯರಾದ. ಪ್ರೊ.ಟಿ ಅವಿನಾಶ್ ರವರು ಮಾತನಾಡುತ್ತಾ, ” ಗಾಂಧಿ ತತ್ವ ಚಿಂತನೆಯು ಎನ್ಎಸ್ಎಸ್ ನ ಪ್ರಮುಖ ಭಾಗ. ಸೇವೆ ಮತ್ತು ಸರಳತೆಯ ಗುಣಗಳನ್ನು ಗಾಂಧಿಯವರು ನಮ್ಮಲ್ಲಿ ತುಂಬಿದ್ದರು. ಸ್ವಾರ್ಥ ರಹಿತವಾದ ಜೀವನ ವಿಧಾನವು ನಮ್ಮದಾಗಬೇಕು.ಸಾಧ್ಯವಾದಷ್ಟು ಇತರರಿಗೆ ನಮ್ಮಿಂದಾದ ಸಹಾಯ ಹಸ್ತವನ್ನು ಚಾಚಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಗುಣಗಳನ್ನು ರೂಡಿಸಿಕೊಂಡರೆ ಬದುಕಿನಲ್ಲಿಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ ಎ. ಶಿವಮೂರ್ತಿ, ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಬಿ ಎನ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿಗಳಾದ ಎಂ ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಎನ್ಎಸ್ಎಸ್ ವಿದ್ಯಾರ್ಥಿಗಳಾದ ಮಾಲತೇಶ್ ಎಚ್ , ಶ್ರೀರಂಜನ್ ಘನತೆ, ಲಂಕೇಶ್, ಸ್ವರೂಪ್ ಮೊದಲಾದವರು ಶಿಬಿರದ ಯಶಸ್ಸಿಗೆ ಕಾರಣರಾದರು.