ಪ್ರಾಚೀನ ಭಾರತೀಯ ಕ್ರೀಡೆ ಕುಸ್ತಿ, ಯಾವ ಬಗೆಯ ಆಯುಧಗಳ ಸಹಾಯವು ಇಲ್ಲದೇ ಕೇವಲ ದೈಹಿಕ ಶಕ್ತಿ ಮತ್ತು ಯುಕ್ತಿಯಿಂದ ಒಬ್ಬನೊಡನೊಬ್ಬ ಸೆಣಸಾಡುವ ಕ್ರೀಡೆ ಕುಸ್ತಿ ಅಥವಾ ಮಲ್ಲಯುದ್ಧ. ಗ್ರೀಕ್ ದೇವತೆಗಳಾದ ಜೂಸ್ ಮತ್ತು ಕೃಸೊ ನಡುವೆ ಭೂಮಿಯ ಒಡೆತನಕ್ಕಾಗಿ ಕುಸ್ತಿ ನಡೆಯಿತೆಂಬ ದಂತ ಕಥೆಯಿದೆ.

        ಈ ಕುಸ್ತಿ ದೇವಾನುದೇವತೆಗಳ ಕಾಲದಿಂದ ರಾಮಾಯಣ,ಮಹಾಭಾರತ ರಾಜ ಮಹಾರಾಜರ ಕಾಲದಿಂದ ಅನನ್ಯ ಪ್ರಖ್ಯಾತಿಗಳಿಸಿತು. ರಾಮಾಯಣದಲ್ಲಿ ಬರುವ ಕಪಿ ಶ್ರೇಷ್ಠರಾದ ವಾಲಿ,ಸುಗ್ರೀವರು ಅಸಾಮಾನ್ಯ ಕುಸ್ತಿಪಟುಗಳಾಗಿದ್ದರು. ಭಾರತದಲ್ಲಿ ಹನುಮಂತ ಕುಸ್ತಿಪಟುಗಳ ಆರಾಧ್ಯ ದೈವ. ಯುರೋಪಿನಲ್ಲಿ 18ನೇ ಶತಮಾನದಲ್ಲಿ ಊಳಿಗ  ಮಾನ್ಯ ಪದ್ಧತಿಯ ಕಾಲದವರೆಗೆ ಈ ಬಗೆಯ ಕುಸ್ತಿ ಪ್ರಖ್ಯಾತವಾಗಿತ್ತು. ಫಿರ್ದೋಷಿ ಕವಿ ತನ್ನ ‘ಶಹನಾಮ ‘ ಕಾವ್ಯದಲ್ಲಿ ಸೋಹ್ರಾಬ್ ಮತ್ತು ರುಸ್ತಂ ಎಂಬ ಪರ್ಶಿಯನ್ ವೀರರ ಕುಸ್ತಿಯನ್ನು ವರ್ಣಿಸಿದ್ದಾರೆ. ಶರೀರದ ಎಲ್ಲಾ ಅಂಗಾಂಗಗಳಿಗೂ ಕುಸ್ತಿಯಿಂದ ವ್ಯಾಯಾಮ ಸಿಗುತ್ತದೆ.ಇದರಿಂದ ಬೆಳವಣಿಗೆ ಸಮ ಪ್ರಮಾಣದಲ್ಲಿ ಆಗುತ್ತದೆ.ಧೈರ್ಯದಿಂದ ಮುನ್ನುಗ್ಗುವ ಆತ್ಮವಿಶ್ವಾಸವನ್ನು ಬಲಗೊಳಿಸುತ್ತದೆ.ವೇಗ ಮತ್ತು ಕಾಲ ಕುಸ್ತಿಯಲ್ಲಿ ಬಹು ಮುಖ್ಯ ಅಂಶಗಳು.

   ಇಂದು ವೈಯ್ಯಾರದ ಆಟಗಳಾದ ಕ್ರಿಕೆಟ್, ಟೆನಿಸ್ ಗಳ ಮುಂದೆ ಮಂಕಾಗಿ ಕಾಣಿಸುತ್ತದೆ. ಇವುಗಳಿಗೆ ದೊರೆಯುತ್ತಿರುವ ಹೇರಳ ಹಣ, ಅಬ್ಬರದ ಪ್ರಚಾರ ಹಾಗೂ ಪ್ರಯೋಜಕತೆಯಿಂದಾಗಿ ತನ್ನ ಅಸ್ತಿತ್ವವನ್ನು ಕ್ರಮೇಣ ಕಳೆದು ಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಹಿಂದೆ ರಾಜ ಮಹಾರಾಜರುಗಳ, ಸಂಸ್ಥಾನಿಕರ ಆಶ್ರಯ, ಪ್ರೋತ್ಸಾಹದಿಂದಾಗಿ ಕುಸ್ತಿಗೆ ಎಲ್ಲಿಲ್ಲದ ಮಹತ್ವವಿತ್ತು.ಆ ಒಂದು ಸಂದರ್ಭದಲ್ಲಿ ಕೆಚ್ಚೆದೆಯಿಂದ ಮೆರೆಯುತ್ತಿದ್ದರು. ಆದರೆ ಇದು ಶಕ್ತಿ ಯುಕ್ತಿಗಳ ಮಿಳಿತವಾದ ಕ್ರೀಡೆ, ಬರೀ ಜಾತ್ರೆ, ಹಬ್ಬ ಹರಿದಿನಗಳಲ್ಲಿ ನೇಪಥ್ಯಕ್ಕೆ ಎಂಬಂತೆ ಕಾಣ ಬರುತ್ತಿದೆ.

“ಅಖಾಡ ಹೇಗೆ ತಯಾರಿಆಗುತ್ತದೆ”:

ಸಾಮಾನ್ಯ ಮೈದಾನಗಳಂತೆ ಕುಸ್ತಿ ಮೈದಾನಇರುವುದಿಲ್ಲ. ಇಲ್ಲಿ  ಕೆಂಪು ಮಣ್ಣಿನಿಂದ ಚಚ್ಚೌಕಾರದ ಕಣವನ್ನು ನಿರ್ಮಿಸಿ ಅದಕ್ಕೆಅಖಾಡವೆಂದು ಸಹ ರೆಯುತ್ತಾರೆ. ಮೆತ್ತೆಗಳಿಂದ ಅಖಾಡ ನಿರ್ಮಾಣ ಮಾಡುತ್ತಾರೆ. ಪ್ರತಿಯೊಂದು ಮತ್ತೆಯ ಉದ್ದ 2 ಮೀಟರ್ ಇದ್ರೆ , ಅಗಲ 1 ಮೀಟರ್‌ ದಪ್ಪ ಇರುತ್ತದೆ. ಹೀಗೆ 4 ಅಂಗುಲ ಮತ್ತೆಗಳನ್ನ ಫೋಮ್‌ರಬ್ಬರಿನಿಂದ ನಿರ್ಮಿಸಲಾಗುತ್ತಿದೆ. ಈ ರೀತಿ ಮತ್ತೆಗಳು ಬಳಸಿ ಕೊಂಡು 6 ಮೀಟರ್‌ಉದ್ದ ಹಾಗೂ 6 ಮೀಟರ್ ಅಗಲವಿರುವ ಚಚ್ಚೌಕವೊಂದು 

 ಭಾರತೀಯ ಶೈಲಿ:- ಭಾರತದಲ್ಲಿ ಸಾಮಾನ್ಯವಾಗಿ ಕೆಂಪು ಮಣ್ಣಿನ ಅಖಾಡದ ಮೇಲೆ ಕುಸ್ತಿ ನಡೆಯುತ್ತದೆ. ಕುಸ್ತಿಯಲ್ಲಿ ಭಾಗವಹಿಸುವ ಜಟ್ಟಿಗಳು ಬಿಗಿಯಾದ ಕಾಚವನ್ನು ಧರಿಸುತ್ತಾರೆ. ಆದರೆ ಮೇಲೊಂದು ಚಡ್ಡಿ, ಇದನ್ನು ಹನುಮಾನ್ ಚಡ್ಡಿ ಎನ್ನುತ್ತಾರೆ. ಕುಸ್ತಿಯಲ್ಲಿ ಒಬ್ಬ ನೆಲಕ್ಕುರುಳಿ ಅವನ ಎರಡು ಭುಜಗಳೂ ಏಕ ಕಾಲದಲ್ಲಿ ನೆಲವನ್ನು ಸ್ಪರ್ಶಿಸಿದರೆ ಅವನು ಸೋತಂತೆ, ನಿಗಧಿಯಾದ ಕಾಲದಲ್ಲಿ ಯಾರೊಬ್ಬರೂ ಸೋಲದಿದ್ದರೆ, ಯಾವ ಜಟ್ಟಿ ಉತ್ತಮವಾಗಿ ಕಾದಾಡಿದ, ಹೊಸ ಹೊಸ ಚಮತ್ಕಾರಗಳನ್ನು, ಪೆಟ್ಟುಗಳನ್ನು ಉಪಯೋಗಿಸಿದ ಎಂಬ ಅಂಶಗಳ ಮೇಲೆ ಗೆಲುವನ್ನು ನಿರ್ಧರಿಸುತ್ತಾರೆ.

ಭಾರತೀಯ ಕುಸ್ತಿಯ ಪಟ್ಟುಗಳಲ್ಲಿ ನಾಲ್ಕು ವಿಧ :-1. ದೈಹಿಕ ಬಲವನ್ನು ಉಪಯೋಗಿಸಿ ಹಾಕುವ ಪಟ್ಟು ಭೀಮಸೇನಿ. 2. ಕೈ ಚಳಕದ ಪಟ್ಟು ಹನುಮಂತೀ.3. ಕೈ ಕಾಲುಗಳನ್ನು ಅತ್ತಿತ್ತ ಅಲುಗಾಡಿಸಲು ಸಾಧ್ಯವಾಗದಂತೆ ತೊಡರಿಸುವ ಪಟ್ಟು ಜಾಂಬವತೀ. 4. ಕೈ ಕಾಲುಗಳನ್ನು ಮುರಿಯುವಂಥ ಪಟ್ಟು ಜರಾ ಸಂಧೀ. ಕೈಯಲ್ಲಿ ವಜ್ರಮುಷ್ಟಿ ಎಂಬ ಆಯುಧವನ್ನು ಹಿಡಿದು ಭಾರತದಲ್ಲಿ ಕುಸ್ತಿ ಯಾಡುತ್ತಿದ್ದರು. ಭಾರತದಲ್ಲಿ ಅತ್ಯುತ್ತಮ ಕುಸ್ತಿಪಟುವನ್ನು ಆರಿಸಲು ಪ್ರತಿ ವರ್ಷವೂ ‘ಹಿಂದ್ ಕೇಸರಿ ‘ ಪ್ರಶಸ್ತಿ ಸ್ಪರ್ಧೆ ನಡೆಯುತ್ತದೆ. ಮಧ್ಯಪ್ರದೇಶದ ರಾಮಚಂದ್ರ, ಪಂಜಾಬಿನ ಕರಣ್ ಸಿಂಗ್, ದೆಹಲಿಯ ಜಾಂದ್ಲಿರಾಮ್, ಮಹಾರಾಷ್ಟ್ರದ ಶ್ರೀಪತಿ ಕೆಂಚನಾಳ್ ಮತ್ತು ಮಾರುತಿ ಯಾನ, ರಾಜಸ್ಥಾನದ ಮಹಾರುದ್ದೀನ್ ಇವರು ಹಿಂದ್ ಕೇಸರಿ ಪ್ರಶಸ್ತಿ ಗಳಿಸಿದವರಲ್ಲಿ ಪ್ರಮುಖರು. ಹಾಗೂ ಧಾರಾಸಿಂಗ್,ಕಿಂಗ್ ಕಾಂಗ್, ಟೈಗರ್ ಜೋಗಿಂದರ್ ಸಿಂಗ್ ಇವರು ವಿಶ್ವ ವಿಖ್ಯಾತ  ಕುಸ್ತಿಪಟುಗಳು.

“ಲಂಗೋಟಿಕಟ್ಟುವ ಸಂಪ್ರದಾಯ”:

    ಕುಸ್ತಿ ಕ್ರೀಡೆಯಲ್ಲಿ ಕುಸ್ತಿಪಟುಗಳಿಗೆ ಲಂಗೋಟಿಕಟ್ಟಲಾಗುತ್ತದೆ. ಗರಡಿಯಲ್ಲಿ ಹೆಚ್ಚೆಚ್ಚು ಸಾಧನೆ ಮಾಡಬೇಕು ಎಂದು ಅಂಬಾಪೂಜೆ, ಹನುಮಂತನ ಪೂಜೆ ಮಾಡುವುದು ಸಂಪ್ರದಾಯ. ಪೂಜೆ ಮಾಡಿ ಲಂಗೋಟಿ ಕಟ್ಟಿದರೆ ಕುಸ್ತಿ ಪಟುಗಳು ಚನ್ನಾಗಿ ಪಳಗುತ್ತಾರೆ, ಹೆಚ್ಚು ಸಾಧನೆ ಮಾಡುತ್ತಾರೆ ಎಂಬುದು ವಾಡಿಕೆಯಾಗಿದೆ.

“ಗರಡಿ ಮನೆಯಲ್ಲಿ ಮಣ್ಣಿನ ಸ್ನಾನ”:

ಕುಸ್ತಿ ಪಟು ತಮ್ಮಅಭ್ಯಾಸ ನಡೆಸಲು ಮಾಡಿಕೊಂಡಿರುವ ಸ್ಥಳಕ್ಕೆ ಗರಡಿ ಮನೆ ಎಂದುಕರೆಯಲಾಗುತ್ತದೆ. ಗರಡಿ ಮನೆಯಲ್ಲಿಅಭ್ಯಾಸಕ್ಕಾಗಿ ಕುಸ್ತಿ ಹಿಡಿಯುತ್ತಾರೆ. ಈ ವೇಳೆಯಲ್ಲಿ ದೇಹಕ್ಕೆ ಗಾಯವಾದ್ರೆ ಅಲ್ಲಿರುವ ಮಣ್ಣನ್ನೇ ಔಷಧಿಯನ್ನಾಗಿ ಬಳಸಲಾಗುತ್ತದೆ. ಈ  ಕಾರಣಕ್ಕಾಗಿಗರಡಿ ಮನೆಯಲ್ಲಿ ಕೆಂಪು ಮಣ್ಣು ಹಾಕಿರುತ್ತಾರೆ. ಈ ಮಣ್ಣಿಗೆ ಕುಂಕುಮ, ಕೇಸರಿ ಸೇರಿದಂತೆ ಅನೇಕ ಔಷಧಿಗಳನ್ನ ಮಿಶ್ರಮಾಡಿ ಹರಡಲಾಗುತ್ತದೆ. ಅಭ್ಯಾಸ ಮುಗಿದ ಮೇಲೆ ಪಟುಗಳು ಅಲ್ಲಿಯ ಮಣ್ಣನ್ನ ಆಳವಾಗಿ ಅಗೆದು ಅದರಲ್ಲಿ ಕತ್ತು ಮೇಲೆ ಮಾಡಿ ಮಲಗಿರುತ್ತಾರೆ. ಇದರಿಂದಅವರ ದೇಹ ಕಾವು ಪಡೆಯುತ್ತದೆ. ಜೊತೆಗೆ ವಿಶ್ರಾಂತಿ ಸಿಗುತ್ತದೆ.ಇದನ್ನ ಕುಸ್ತಿ ಪರಿಭಾಷೆಯಲ್ಲಿ ಮಣ್ಣಿನ ಸ್ನಾನಎಂದುಕರೆಯಲಾಗುತ್ತದೆ.

    “ಮೈಸೂರು ದಸರಾಕ್ಕೂ ಕುಸ್ತಿಗೂ ಇರುವ ನಂಟು “:

ಮೈಸೂರು ದಸರಾ ಎಷ್ಟೊಂದು ಸುಂದರ ಈ ಹಾಡು ಕನ್ನಡಿಗರ ಎದೆಯಲ್ಲಿ ಅಚ್ಚಾಗಿ ಉಳಿದಿದೆ. ಯಾಕೆಂದರೆ ಮೈಸೂರು ದಸರಾದ ವೈಭವವೇ ಅಂತದ್ದು. ಈ ವೈಭವ ಒಂದುಕಡೆಯಾದರೆ, ಮತ್ತೊಂದೆಡೆ ಸಾಹಸ ಕ್ರೀಡೆಗಳು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಇಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳು ವಿಶ್ವವಿಖ್ಯಾತಿ ಪಡೆದಿದೆ. ಹಾಗಾಗಿ ಸ್ಪರ್ಧೆಗಾಗಿದೇಶ ವಿದೇಶಗಳಿಂದ, ಬೇರೆ ರಾಜ್ಯಗಳಿಂದ ಪೈಲ್ವಾನರು ಬಂದು ಭಾಗವಹಿಸುತ್ತಾರೆ.ಜೊತೆಗೆ ಉತ್ತರಕರ್ನಾಟಕದ ಎಷ್ಟೋ ಕುಸ್ತಿ ಪೈಲ್ವಾನ್‌ರು ದಸರಾ ಸಮಯದಲ್ಲಿ ತಮ್ಮ ಊರುಗಳನ್ನ ಬಿಟ್ಟು ಮೈಸೂರಿನಲ್ಲಿ ಟಿಕಾಣಿ ಹೂಡುತ್ತಾರೆ. ತಮ್ಮ ಶಿಷ್ಯರ ಪರಾಕ್ರಮ ನೋಡಿ ಖುಷಿ ಪಡುತ್ತಾರೆ. ಇನ್ನು ಈ ಭಾಗದ ಹಬ್ಬ, ಜಾತ್ರೆಗಳಲ್ಲಿ ಕುಸ್ತಿ ಪಂದ್ಯಾವಳಿ ಸರ್ವೆ ಸಾಮಾನ್ಯವಾಗಿದೆ. ದಸರಾ ಅವಧಿಯಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವವರು ಗೆದ್ದು ಬಹುಮಾನ ಪಡೆದು ಹೆಸರುವಾಸಿಯಾಗುತ್ತಾರೆ. ಈ ಪಂದ್ಯಾವಳಿ ನೋಡಲು ಜನಸಾಗರವೇ ಸೇರುತ್ತದೆ.ದಸಾರ ಪ್ರಾರಂಭದ ಕಾಲದಿಂದ ಇಲ್ಲಿವರೆಗೂ ಈ ಪದ್ದತಿ ನಡೆಯುತ್ತ ಬಂದಿದೆ.

ಮಾಯವಾದ ಕೆಂಪು ಮಣ್ಣಿನ ವಾಸನೆ : ಹಿಂದಿನ ಕಾಲದಲ್ಲಿ ಕೆಂಪು ಮಣ್ಣಿನ ಗರಡಿ ಮನೆಗಳಲ್ಲಿ ಮಲ್ಲ ಯುದ್ಧದಲ್ಲಿ ಕೆಚ್ಚೆದೆಯಿಂದ ಪೈಲ್ವಾನರು ಮೆರೆಯುತ್ತಿದ್ದರು, ರಾಜ ಮಹಾರಾಜರ ಕಾಲದಲ್ಲಿ ಗರಡಿ ಮನೆಗಳಿಗೆ ವಿಶೇಷವಾದ ಮಹತ್ವವನ್ನು ಕೊಡುತ್ತಿದ್ದರು. ಜಗಜಟ್ಟಿಗಳಿಗೆ ಬೇಕಾದ ಸಲಕರಣೆಗಳು, ಪೌಷ್ಟಿಕಾಂಶಗಳಿರುವ ಊಟ ಉಪಚಾರಗಳ ವ್ಯವಸ್ಥೆಯನ್ನು  ಮಾಡುತ್ತಿದ್ದರು, ಹಾಗೆಯೇ ಪೈಲ್ವಾನರು ಸಹ ಯಾವುದೇ ತೆರನಾದ ದುಶ್ಚಟಗಳಿಗೆ ಬಲಿಯಾಗುತ್ತಿರಲಿಲ್ಲ.ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಜಾತ್ರೆಗಳಲ್ಲಿ ತಮ್ಮ ಕಸರುಗಳನ್ನು ತೋರಿಸುತ್ತಾ ಗರಡಿ ಮನೆಯ ವೈಶಿಷ್ಟ್ಯತೆಯನ್ನು ಇಮ್ಮಡಿಗೊಳಿಸುತ್ತಿದ್ದರು.

      ಆದರೆ ಆಧುನಿಕತೆಯ ಹಾವಳಿ, ಮಾಡ್ರನ್ ಜಿಮ್ ಗಳ ಭರಾಟೆಯಿಂದ ಕುಸ್ತಿ ಪಟ್ಟು ಕಲಿಯುವವರಿಲ್ಲ, ಅದಕ್ಕೆ ತಕ್ಕ ಪ್ರೋತ್ಸಾಹ,ಉತ್ತಮ ತರಬೇತುದಾರರು ಇಲ್ಲದೆ ಇಂದು ಗರಡಿ ಮನೆ ಅವಸಾನದತ್ತ ಸಾಗಿದೆ. ಹಾಗಾಗಿ ಇನ್ನೂ ಕುಸ್ತಿಯ ಗತ್ತು ಗೈರತ್ತುಗಳನ್ನು ಮತ್ತೆ ಕಾಣಬಹುದಾ?

         ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

ಬಾಕ್ಸ್ :

          ಪ್ರಾಚೀನ ಭಾರತೀಯ ಕುಸ್ತಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ರಾಜ ಮಹಾರಾಜರುಗಳ ಕಾಲದಲ್ಲಿ ಅದಕ್ಕೆ ವಿಶೇಷವಾದ ಸ್ಥಾನಮಾನ ಇತ್ತು,ಗರಡಿ ಮನೆಗಳು, ಕುಸ್ತಿ ಪೈಲ್ವಾನರ ಬಗ್ಗೆ ವಿಶೇಷವಾದ ಕಾಳಜಿ ಇತ್ತು, ಆದರೆ ಈಗ ಹಬ್ಬ, ಜಾತ್ರಾ ಸಮಯಗಳಲ್ಲಿ ಮಾತ್ರ ಇಂದು ಕಾಣಬಹುದು, ಗತಕಾಲದ ಕುಸ್ತಿಯ ವೈಭವ ಇಂದು ಅಷ್ಟೊಂದು ಕಾಣುತ್ತಿಲ್ಲ, ಸರ್ಕಾರ ಮತ್ತು ಸಂಘ ಸಂಸ್ಥೆಗಳು  ನಮ್ಮ ಭಾರತೀಯ ಕ್ರೀಡೆ ಕುಸ್ತಿಯನ್ನು  ಪ್ರೋತ್ಸಾಹಿಸಬೇಕಾಗಿದೆ. ಅದರ ಹಿಂದಿನ ಗಥ ವೈಭವವನ್ನು ಇಮ್ಮಡಿಗೊಳಿಸಬೇಕಾಗಿದೆ.  ಆಗಾದಾಗ ಮಾತ್ರ ಕುಸ್ತಿಯ ಗತ್ತು, ಗೈರತ್ತುಗಳನ್ನು ಮತ್ತೆ ಕಾಣಬಹುದು.

By admin

ನಿಮ್ಮದೊಂದು ಉತ್ತರ

You missed

error: Content is protected !!