ಹೊಸನಗರ: ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು.
ದೇವಿಯ ತವರುಮನೆ ಎಂದು ಪ್ರಸಿದ್ಧಿ ಪಡೆದಿರುವ ಪಟ್ಟಣದ ಹಳೆಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯಿತು. ಸಡಗರದಿಂದ ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯರು ಉಡಿ ತುಂಬಿಸುವ ಮೂಲಕ ಹರಕೆ ಸಲ್ಲಿಸಿದರು.
ಇದಕ್ಕೂ ಮುನ್ನ ಮಾರಿಕಾಂಬಾ ದೇವಿಯ ವಿಗ್ರಹಕ್ಕೆ ಗಣಪತಿ ದೇವಸ್ಥಾನದ ಆವರಣದಲ್ಲಿ ಪೂಜೆ ನಡೆಯಿತು. ವಿವಿಧ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ, ದುರ್ಗಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳಿಸಲಾಯಿತು.
ಊರಿನ ಗಣ್ಯರು, ಜಾತ್ರಾ ಸಮಿತಿ ಪದಾಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ ಸುಮಾರು ಐದು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.