ಶಿವಮೊಗ್ಗ: ಗ್ಯಾರಂಟಿ ಯೋಜನೆ ಬದುಕಿನಲ್ಲಿ ಭಾಗ್ಯ ತರುವ ಯೋಜನೆ. ಕೊಟ್ಟ ಮಾತನ್ನು ಈಡೇರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವನಿಧಿ ಯೋಜನೆ ಯುವಕರಿಗೆ ಅನುಕೂಲವಾಗುವ ಯೋಜನೆಯಾಗಿದೆ. ನೀವು ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಮಾತ್ರ ಆದ್ಯತೆ ಕೊಡದೇ ನೀವೂ ಹತ್ತಾರು ಜನರಿಗೆ ಉದ್ಯೋಗ ಕೊಡುವಂತಾಗಲಿ ಎಂದರು.
ಯುವಕರು, ಯುವತಿಯರು ವಿಶ್ವಮಟ್ಟದಲ್ಲಿ ಆಲೋಚನೆ ಮಾಡಿ. ನೀವು ಉದ್ಯೋಗಿಗಳು ಮಾತ್ರವಾಗದೇ ಉದ್ಯಮಿಗಳಾಗಿ. ಕರ್ನಾಟಕವನ್ನು ಅಭಿವೃದ್ಧಿ ಶೀಲ ರಾಜ್ಯವನ್ನಾಗಿ ಮಾಡುತ್ತಿದ್ದೇವೆ. ರಾಜೀವ್ ಗಾಂಧಿ ಯುವಕರಿಗಾಗಿ ಹೊಸ ಯೋಜನೆ ತಂದಿದ್ದರು. ನೀವು ನಿಮ್ಮಲ್ಲಿರುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ರಾಜ್ಯಕ್ಕೆ, ದೇಶಕ್ಕೆ ಕೊಡುಗೆ ನೀಡಿ. ಯಾರ ಟೀಕೆಗೂ ಜಗ್ಗದೇ ಮುನ್ನುಗ್ಗಿ ಎಂದರು.
ಯುವಕರು ಹೇಡಿಗಳಾದೇ ಹೋರಾಟ ಮಾಡಿ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ನೀವು ಗೌರವದಿಂದ ಬದುಕಲು ಸರಿಯಾದ ದಾರಿಯಲ್ಲಿ ನಡೆಯಿರಿ. ಶರಣ ಪ್ರಕಾಶ ಪಾಟೀಲರು, ಮಧು ಬಂಗಾರಪ್ಪ, ಶಾಸಕರು ಉತ್ತಮವಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.