ಶಿವಮೊಗ್ಗ: ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿಮಾಡಿರುವುದರಿಂದ ಸಂಘಟನೆಗೆ ಮತ್ತು ಮುಂದಿನ ಚುನಾವಣೆಗೆ ಶಕ್ತಿ ಮತ್ತು ಹೊಸ ಸಂಚಲನ ಮೂಡಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬ ಯುವನಾಯಕನನ್ನು ಪ್ರಧಾನಿ ಮೋದಿಯವರು ಗುರುತಿಸಿ ಆಯ್ಕೆ ಮಾಡಿದ್ದಾರೆ.ಮುಂದೆ ಲೋಕಸಭೆ ಚುನಾವಣೆ ಬರಲಿದೆ. ಎಲ್ಲಾ ೨೮ಕ್ಷೇತ್ರಗಳನ್ನೂ ನಾವು ಗೆಲ್ಲುವತ್ತ ಸಾಗುತ್ತೇವೆ.
ವಿ.ವೈ. ವಿಜಯೇಂದ್ರ ಅವರು ಸಂಘಟನೆಗೆ ಹೆಚ್ಚು ಒತ್ತುನೀಡಲಿದ್ದಾರೆ. ಲೋಕಸಭಾ ಚುನಾವಣೆ ಅಲ್ಲದೆ ಜಿ.ಪಂ. ತಾಪಂ. ಚುನಾವಣೆಗಳೂ ಬರಲಿವೆ. ಈ ಎಲ್ಲಾ ಚುನಾವಣೆಗಳನ್ನು ವಿಜಯೇಂದ್ರ ನಾಯಕತ್ವದಲ್ಲಿ ಯಶಸ್ವಿಯಾಗಿ ಎದುರಿಸುತ್ತೇವೆ ಎಂದರು.
ಹಳೆ ಬೇರಿನ ಜೊತೆಗೆ ಹೊಸ ಚಿಗುರು ಸೇರಿಕೊಂಡಿದೆ. ಪಕ್ಷದ ಎಲ್ಲಾ ಹಿರಿಯರು ವಿಜಯೇಂದ್ರ ಅವರಿಗೆ ಸಹಕಾರ ನೀಡುತ್ತಾರೆ. ಮಾರ್ಗದರ್ಶನ, ಸಲಹೆ ನೀಡುತ್ತಾ ಇರುತ್ತಾರೆ.
ಈಗಾಗಲೇ ವಿಜಯೇಂದ್ರ ಅವರು ಪಕ್ಷದಲ್ಲಿ ಹಲವು ಹುದ್ದೆ ಮತ್ತು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜ್ಯಾಧ್ಯಕ್ಷರ ಹುದ್ದೆಯನ್ನು ಕೂಡ ಸಮರ್ಥವಾಗಿ ನಿಭಾಯಿಸುತ್ತಾರೆ. ಅವರ ನೇಮಕಕ್ಕೆ ಪ್ರಧಾನಿ ಸೇರಿದಂತೆ ಪಕ್ಷದ ಎಲ್ಲಾ ಹಿರಿಯರಿಗೆ ಅಭಿನಂದನೆಗಳು ಎಂದರು.