ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯರಿಂದ ಜಿ.ಪಂ. ಸಿಇಓ ವೈಶಾಲಿ ಅವರಿಗೆ ಮನವಿ
ಶಿವಮೊಗ್ಗ, ನ.05:
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಅವರನ್ನು ಭೇಟಿ ಮಾಡಿದರು.
ಭೇಟಿಯ ಸಮಯದಲ್ಲಿ ಭದ್ರಾ ಜಲಾಶಯದಿಂದ ಕಾಲುವೆ ಹಾಗೂ ನಾಲೆಗಳಿಗೆ ನೀರು ಹರಿಸುವುದನ್ನು ಈಗಾಗಲೇ ನಿಲ್ಲಿಸಿದ್ದು, ನಾಲೆ ಹಾಗೂ ಕಾಲುವೆಗಳಲ್ಲಿ ಸಾಕಷ್ಟು ಸಿಲ್ಟ್ (ಹೂಳು) ತುಂಬಿಕೊಂಡು ಅಚ್ಚುಕಟ್ಟು ಭಾಗದ ಕೊನೆಯ ಭಾಗದ ರೈತರಿಗೆ ನೀರು ತಲುಪದೇ ಅನಾನುಕೂಲವಾಗಿದ್ದು, ಸೂಕ್ತ ರೀತಿಯಲ್ಲಿ ಬೆಳೆ ಬೆಳೆಯಲು ಸಮಸ್ಯೆಯಾಗಿ, ರೈತರು ಆರ್ಥಿಕವಾಗಿ ಸಬಲರಾಗಲು ಹಿನ್ನಡೆಯುಂಟಾಗಿದ್ದು, ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಂಡು ನಾಲೆ ಹಾಗೂ ಕಾಲುವೆ ಗಳಲ್ಲಿ ತುಂಬಿಕೊಂಡಿರುವ ಹೂಳು ತಗೆಸಿ ಕೊಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಸಿ.ಇ.ಓ ವೈಶಾಲಿ ಅವರು, ನಿಮ್ಮ ಮನವಿಯನ್ನು ಪುರಸ್ಕರಿಸುತ್ತೇನೆ, ಅತೀ ಶೀಘ್ರವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.