ಶಿವಮೊಗ್ಗ, ಅ.೧೩:
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿ ರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಾದ ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಆಯೋಗಗಳ ಸಾಮಾಜಿ, ಶೈಕ್ಷಣಿಕ ಸಮೀಕ್ಷೆ ನಡೆದು ಅದರ ವರದಿಯೂ ಸಿದ್ಧವಾಗಿದೆ. ಈ ವರದಿಗಾಗಿಯೇ ೧೮೦ ಕೋಟಿ ರೂ.ಖರ್ಚು ಮಾಡಲಾಗಿದೆ. ಸರ್ಕಾರದ ಅಧಿಕೃತ ಸಂಸ್ಥೆಯಿಂದಲೇ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕಾಂತರಾಜ್ ನೇತೃತ್ವದಲ್ಲಿ ವರದಿ ಮಂಡನೆಯಾಗಿ ಇಷ್ಟು ವರ್ಷಗಳಾ ದರೂ ಸರ್ಕಾರಕ್ಕೆ ಅದನ್ನು ಸಲ್ಲಿಸಲಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜಕೀಯ ಪಕ್ಷಗಳು ಕೂಡ ಇದನ್ನು ಸ್ವೀಕಾರ ಮಾಡಿಲ್ಲ ಎಂದು ದೂರಿದರು.


ಇದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಮತ್ತು ಹಿಂದುಳಿದ ಆಯೋಗ ಶೀಘ್ರವೇ ಇದನ್ನು ಬಹಿರಂಗಪಡಿಸಬೇಕು. ಆಯೋಗ ತಕ್ಷಣವೇ ಸರ್ಕಾರಕ್ಕೆ ನೀಡಬೇಕು. ಸರ್ಕಾರ ಕೂಡ ಪರಿಷ್ಕರಣೆಯ ನೆಪ ಹೇಳದೆ ಅದನ್ನು ಜಾರಿಗೆ ತರಬೇಕು. ಆದರೆ ನಮಗೆ ಈ ಬಗ್ಗೆ ವಿಶ್ವಾಸವೇ ಇಲ್ಲದಂತಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಾರಿಗೆ ತರಲು ಆಗ್ರಹಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಇದನ್ನು ಜಾರಿಗೆ ತರಲು ರಾಜಕೀಯ ಪಕ್ಷಗಳಿಗೆ ಅದೇಕೆ ಭಯವೋ ಗೊತ್ತಿಲ್ಲ. ಇದು ಜನಗಣತಿಯಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬೇಕು. ಇದು ಮುಂದುವರೆದ ಜಾತಿಗಳನ್ನೂ ಒಳಗೊಂಡಂತೆ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆಯಾ ಗಿದೆ. ಸರ್ವೆ ಮಾಡಿ ಸಮೀಕ್ಷೆ ಮಾಡಲಾಗಿದೆ. ಪ್ರತಿ ೧೦ ವರ್ಷಕ್ಕೊಮ್ಮೆ ಈ ರೀತಿಯ ಸಮೀಕ್ಷೆ ಅಗತ್ಯ ಎಂದು ಹೇಳಲಾಗಿದೆ. ಆದರೂ ಕೂಡ ಸರ್ಕಾರಗಳು ಅದೇಕೆ ಮೀನಾಮೇಷ ಎಣಿಸುತ್ತವೆಯೋ ಗೊತ್ತಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಪ್ರಣಾಣಿಕೆಯಲ್ಲಿ ಹೇಳಿದಂತೆ ಕಾಂತರಾಜ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.


ಒಕ್ಕೂಟದ ಪ್ರೊ. ರಾಚಪ್ಪ ಮಾತನಾಡಿ, ಕಾಂತರಾಜ್ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ಮೂರು ಹಂತದ ಕಾರ್ಯಕ್ರಮಗಳನ್ನು ನಾವು ಹಿಂದುಳಿದ ಜನಜಾಗೃತಿ ವೇದಿಕೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಬರುವ ಸೋಮವಾರ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರನ್ನು ಭೇಟಿ ಮಾಡುತ್ತೇವೆ. ನಂತರ ೨ನೇ ಹಂತವಾಗಿ ಧರಣಿ ಸತ್ಯಾಗ್ರಹ ಹಾಗೂ ಪಂಜಿನ ಮೆರವಣಿಗೆ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿ. ರಾಜು, ಎನ್. ಉಮಾಪತಿ, ಡಿ.ಆರ್.ಉಮೇಶ್ ಯಾದವ್, ರಾಜೇಶ್, ಮನೋಹರ್, ಜನಮೇಜಿ ರಾವ್, ನಟರಾಜ್, ಲೋಕೇಶ್, ಚನ್ನವೀರಪ್ಪ ಗಾಮನಕಟ್ಟೆ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!