ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎಎ ವೃತ್ತದಲ್ಲಿ ಅಲಂಕಾರ ತೆರವುಗೊಳಿಸುವ ವಿಚಾರಕ್ಕೆ ಶುಕ್ರವಾರ ರಾತ್ರಿ ಎರಡು ಕೋವಿನನವರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಏರ್ಪಟ್ಟಿತ್ತು.

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ನಗರದ ಅಮೀರ್ ಅಹಮದ್ ಸರ್ಕಲ್ ಮತ್ತು ಶಿವಪ್ಪನಾಯಕ ಪ್ರತಿಮೆ ಸಮೀಪ ಮಾಡಿದ್ದ ಅಲಂಕಾರ ತೆರವು ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಎರಡೂ ಕೋಮಿನವರು ಗುಂಪುಗೂಡಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸಿದರು.

ಎರಡೂ ಕಡೆಯ ಯುವಕರು ಗಂಪುಗೂಡಿ ಘೋಷಣೆ ಕೂಗಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಎರಡು ಗುಂಪುಗಳ ಜೊತೆ ಚರ್ಚೆ ನಡೆಸಿ, ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್.ಪಿ. ಮಿಥುನ್ ಕುಮಾರ್, ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಯಾರೂ ಗೊಂದಲ ಮೂಡಿಸುವ ಹೇಳಿಕೆ ನೀಡಬಾರದು. ಅಲಂಕಾರ ಸಂಬಂಧ ಗೊಂದಲ ಉಂಟಾಗಿತ್ತು. ಎರಡೂ ಕಡೆಯವರ ಜೊತೆಗೆ ಮಾತನಾಡಿದ್ದು, ಸಮಾಧಾನಪಡಿಸಲಾಗಿದೆ. ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!