ಶಿವಮೊಗ್ಗದ ಹೃದಯ ಭಾಗದಲ್ಲಿರುವ ಗೋಪಿ ವೃತ್ತ ಎಂದೇ ಕರೆಯಲ್ಪಡುವ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂಬ ನಾಮಫಲಕ ಅನಾ ವರಣಗೊಳಿಸುವ ಕಾರ್ಯಕ್ರಮ ಆ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಟಿ. ಸೀನಪ್ಪ ಶೆಟ್ಟಿ ಕುಟುಂಬದ ಸದಸ್ಯರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
ಟಿ. ಸೀನಪ್ಪ ಶೆಟ್ಟಿಯ ಕುಟುಂಬದ ಹಾಗೂ ಶ್ರೀನಿಧಿ ಸಂಸ್ಥೆಯ ಪಾಲುದಾರ ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟಿ ಮಾತನಾಡಿ, ೧೯೫೮ರಲ್ಲಿಯೇ ಅಂದಿನ ಪುರಸಭೆ ಅನುಮತಿಯೊಂದಿಗೆ ಟಿ. ಸೀನಪ್ಪ ಶೆಟ್ಟಿ ವೃತ್ತವನ್ನು ಸ್ಥಾಪಿಸಲಾಗಿತ್ತು. ಆಗಿನ ಕಾಲದಲ್ಲಿ ಟಿ. ಸೀನಪ್ಪ
ಶೆಟ್ಟರು ಸುಮಾರು ೨೫ ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಈ ವೃತ್ತ ನಿರ್ಮಿಸಿದ್ದರು. ಸುತ್ತಲೂ ಕಲ್ಲನ್ನು ವೃತ್ತಾಕಾರದಲ್ಲಿ ಬೆಳೆಸಿ ಆಕರ್ಷಕವಾಗಿ ನಿರ್ಮಿಸಲಾಗಿತ್ತು. ೧೯೫೯ರಲ್ಲಿ ಮತ್ತೆ ಈ ವೃತ್ತದಲ್ಲಿ ಮೊದಲ ಬಾರಿಗೆ ಸುಮಾರು ೨೦ಸಾವಿರ ರೂ. ವೆಚ್ಚದಲ್ಲಿ ನೀರಿನ ಆಕರ್ಷಕ ಕಾರಂಜಿ ನಿರ್ಮಿಸಲಾಗಿತ್ತು. ಈ ವೃತ್ತದಲ್ಲಿ ಹಾದುಹೋಗುವುದೇ ಒಂದು ರೋಮಾಂಚಕಾರಿ ಅನುಭವವಾಗಿತ್ತು ಎಂದರು.
ಆದರೆ ಕಾಲಕ್ರಮೇಣ ಸಂಚಾರ ದಟ್ಟಣೆ ಹೆಚ್ಚಾದಾಗ ಸಿಗ್ನಲ್ ಲೈಟ್ ಅಳವಡಿಕೆಗೆ ವೃತ್ತವನ್ನು ಕೆಡವಲಾಯಿತು. ಆಗಲೂ ಸಹ ಶ್ರೀನಿಧಿ ಕುಟುಂಬ ಲೈಟ್ ಅಳವಡಿಕೆಗೆ ೧೫ ಸಾವಿರ ರೂ. ವಂತಿಗೆ ನೀಡಿತ್ತು. ನಂತರ ಇಲ್ಲಿದ್ದ ಕಾರಂಜಿಯನ್ನು ಆಗಿನ ನಗರಸಭೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಹಿನ್ನೆಲೆಯಲ್ಲಿ ಕಾರಂಜಿ ಕೂಡ ತೆರವಾಗಿದೆ ಎಂದರು.
ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಕಲ್ಲು ಕೆತ್ತನೆ ಮಾಡಿಸಿ ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಫಲಕವನ್ನು ಅಳವಡಿ ಸಲಾಗಿದೆ. ಇದರ ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ ೧೧ ಗಂಟೆಗೆ ಶಾಸಕ ಎಸ್. ಎನ್. ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರು ನೆರವೇರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿ. ಸೀನಪ್ಪ ಶೆಟ್ಟಿ ಕುಟುಂಬದ ಪ್ರಮುಖರಾದ ವೆಂಕಟೇಶಮೂರ್ತಿ, ಟಿ.ಎಸ್. ಸಂದೀಪ್, ವಿಶ್ವನಾಥ್, ಗುರುಚರಣ್, ರಘುನಂದನ್, ಚೇತನ್ ಮುಂತಾದವರಿದ್ದರು.