
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ಸಂಸ್ಥೆಯ ಮುಖ್ಯ ಪಾತ್ರವಾಗಿದೆ ಎಂದು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತೀರ್ಥಹಳ್ಳಿ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್, ರ್ಯಾಲಿ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ರಾ, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮಕ್ಕಳು ಭಾಗವಹಿಸಿ ತೀರ್ಥಹಳ್ಳಿಗೆ ಒಳ್ಳೆ ಹೆಸರನ್ನು ತಂದುಕೊಟ್ಟಿದ್ದಾರೆ. ಇದರಿಂದ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕುರಿಯಕೋಸ್ ಸಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಕೇವಲ ಪಠ್ಯ ಪುಸ್ತಕದಿಂದ ಸಂಪೂರ್ಣ ಕಲಿಕೆ ಸಾಧ್ಯವಿಲ್ಲ ಪಠ್ಯೇತರ ಚಟುವಟಿಕೆಗಳಲ್ಲು ಮಗು ಮುಂದಿರಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉತ್ತಮ ಸೇವೆ ಸಲ್ಲಿಸುತ್ತಿರುವುದರಿಂದ ಮಕ್ಕಳಲ್ಲಿ ಸಂಘಟನಾ ಮನೋಭಾವ, ಶಿಸ್ತು, ಸಂಯಮ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ ಸಮಾಜದ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸುತ್ತಿರುವುದು ಶ್ಲಾಘನಿಯ ಎಂದರು.
ಜಿಲ್ಲಾ ಆಯುಕ್ತರಾದ ಕೆ.ಪಿ.ಬಿಂದುಕುಮಾರ ಹಾಗೂ ಶಕುಂತಲಾ ಚಂದ್ರಶೇಖರ್, ಅಕ್ಷರದಾಸೋಹ ತಾಲ್ಲೂಕಾಧಿಕಾರಿ ಪ್ರವೀಣ್ ಅವರು ಮಕ್ಕಳಿಗೆ ಶುಭಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್ ಮಾತನಾಡಿ, ಮಕ್ಕಳಲ್ಲಿ ವಿನಯ, ಶಿಸ್ತು ಮತ್ತು ಸಹೋದರತ್ವ ಪುಸ್ತಕ ಓದುವುದರಿಂದ ಬರುವುದಿಲ್ಲ. ಮಕ್ಕಳು ಸಮಾಜದಲ್ಲಿ ಬೆರೆಯಬೇಕು ಒಳಿತು ಕೆಡುಕುಗಳನ್ನು ಅವಲೋಕಿಸಬೇಕು. ಸರಿಯಾದ ಮಾರ್ಗದಲ್ಲಿ ನಡೆದು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ನಡೆಸುವಂತಾಗಬೇಕು ಎಂದರು.
ಎಲ್.ಎ.ಕಾರ್ಯದರ್ಶಿ ಎ.ಎಸ್.ಮಂಜುನಾಥ, ಸುಜಾತಾ, ಎ.ಎಸ್.ಒ.ಸಿ ಭಾರತಿ ಡಾಯಸ್, ಉಪಾಧ್ಯಕ್ಷ ಪ್ರಭಾವತಿ ಶ್ಯಾಮಣ್ಣ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಎಡಿಸಿಗಳಾದ ಜಸ್ಸಿಬಾಯಿ, ಎ.ಎಂ.ಗಿರೀಶ, ರತ್ನಾಕರ, ಪಿಆರ್ಒ ವಿಜಯಕುಮಾರ, ಶಿವಶಂಕರ, ಬಿಇಒ ಕಚೇರಿಯ ಸಿಬ್ಬಂದಿ, ತಾಲೂಕಿನ ವಿವಿಧ ಶಾಲೆಯ 250 ಸ್ಕೌಟ್ಸ್ ಗೈಡ್ಸ್ ಗಳು ಭಾಗವಹಿಸಿದ್ದರು.