ಸಮಾಜವಾದದ ಮುಖ್ಯ ಸಾರವೇ ಮನುಷ್ಯ ಸಂಬಂಧ. ಇದು ಮಾನವ ಕಲ್ಯಾಣಕ್ಕಾಗಿಯೆ ತುಡಿಯುತ್ತಿರುತ್ತದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗ, ಕನ್ನಡ ವಿವಿಯ ಚರಿತ್ರೆ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಅವರು ಜನ್ಮಶತಾಬ್ದಿ ವರ್ಷದ ಅಂಗವಾಗಿ ಆಯೋಜಿಸಿದ್ದ ‘ಸಮಾಜವಾದ ಮತ್ತು ಆಧುನಿಕ ಕರ್ನಾಟಕ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮತ್ತೊಬ್ಬರ ಸುಖ ಬಯಸುವುದೇ ಸಮಾಜವಾದದ ಮುಖ್ಯ ಉದ್ದೇಶ. ಶಾಂತವೇರಿ ಗೋಪಾಲಗೌಡರು ಈ ಆದರ್ಶವನ್ನು ಹೊಂದಿದವರು. ಅವರ ಬದುಕೇ ಒಂದು ಸಮಾಜವಾದ. ಅವರು ನಮ್ಮ ನಡುವೆ ಇದ್ದರು ಎಂಬುದೇ ಒಂದು ರೋಮಾಂಚನ. ಆ ಕಾಲಘಟ್ಟವೇ ಬೇರೆಯಾಗಿ ಕಂಡರೂ ಕೂಡ ವರ್ತಮಾನದ ಕಾಲಘಟ್ಟದಲ್ಲಿ ಅವರ ಆದರ್ಶಗಳು ಅಗತ್ಯವಾಗುತ್ತವೆ. ಇಂದಿನ ಜನಪ್ರತಿನಿಧಿಗಳ, ಕೆಲವು ರಾಜಕಾರಣಿಗಳು ಅರಮನೆಯಂತಹ ಬಂಗಲೆಗಳಲ್ಲಿ ಅರಸರಂತೆ ಬದುಕುತ್ತಿದ್ದಾರೆ. ಇಲ್ಲಿ ಸಮಾಜವಾದ ಹೇಗೆ ಉಸಿರಾಡಲ ಸಾಧ್ಯ ಎಂದರು.
ಧರ್ಮ, ಜಾತಿಗಳ ನಡುವೆ ಮನುಷ್ಯ ಪ್ರೀತಿಗಳು ಮರೆಯಾಗುತ್ತಿವೆ. ಸಂಪತ್ತು ಕ್ರೋಡೀಕರಣವಾಗುತ್ತಿದೆ. ಎಲ್ಲಾ ವಾದಗಳೂ ಸಮಾಜವಾದದ ಸುತ್ತವೇ ತಿರುಗುತ್ತವೆ. ಇವೆಲ್ಲವೂ ಮನುಷ್ಯ ಸಂಬಂಧಗಳನ್ನು ಬೆಸೆಯುವಂತೆ ಇರಬೇಕು. ಈ ಭೂಮಿ, ಗಾಳಿ,ನೀರು, ಬೆಳಕು ಇವೆಲ್ಲವನ್ನೂ ಸ್ವತಂತ್ರವಾಗಿ ಪಡೆಯುವ ಹಾಗಿರಬೇಕು. ಜೊತೆಗೆ ಮುಂದಿನ ಪೀಳಿಗೆಗೂ ಉಳಿಸುವಂತಿರಬೇಕು. ಆದರೆ ಅದಾಗುತ್ತಿಲ್ಲ. ಇವುಗಳ ನಡುವೆಯೇ ನಮಗೆ ಮತ್ತೆ ಮತ್ತೆ ಗೋಪಾಲಗೌಡರು ಆದರ್ಶವಾಗಿ ನಿಲ್ಲುತ್ತಾರೆ. ವಿದ್ಯಾರ್ಥಿಗಳು ಅವರನ್ನು ಕುರಿತು ಓದಬೇಕು ಎಂದು ಹೇಳಿದರು.
ವಿಚಾರ ಸಂಕಿರಣದ ಸಂಚಾಲಕ ಹಾಗೂ ಕುವೆಂಪು ವಿವಿ ಇತಿಹಾಸ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಕೆ.ಎನ್ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿ, ಬಂಡವಾಳಶಾಹಿಗಳಿಗೆ ಪ್ರತ್ಯುತ್ತರವಾಗಿ ಸಮಾಜವಾದ ನಿಲ್ಲುತ್ತದೆ. ನಾಗರಿಕತೆ ಸಂಸ್ಕೃತಿ,
ಆರ್ಥಿಕತೆಗಳ ನಡುವೆ ತನ್ನದೇ ಆದ ಲೋಕದೃಷ್ಟಿ ಬೀರಿರುವ ಸಮಾಜವಾದ ಒಂದು ಸೈದ್ಧಾಂತಿಕ ಸ್ವರೂಪ ಪಡೆದಿದ್ದು ನಿಜವಾದರೂ ಅದು ಸೋಲು ಕಾಣುತ್ತಲೇ ಬಂದಿದೆ. ಪ್ರಸ್ತುತ ಸಮಾಜವಾದ ಪ್ರತ್ಯೇಕತೆಯನ್ನು ಪಡೆದು ರಾಜಕಾರಣಕ್ಕೆ ಸಿಲುಕಿದೆ. ಹಾಗಾಗಿ ಮರು ಪರಿಶೀಲನೆಗೆ ಅದು ಒಳಪಡುವ ಅಗತ್ಯವಿದೆ ಎಂದರು.
ಆಶಯ ನುಡಿಗಳನ್ನಾಡಿದ ಹಂಪಿ ವಿವಿಯ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಪೂಣಚ್ಚ ತಂಬಂಡ ಸಮಾಜವಾದವನ್ನು ಪ್ರಸ್ತುತ ದಿಕ್ಕುತಪ್ಪಿಸಲಾಗುತ್ತಿದೆ. ಅದನ್ನು ಹೇಗೆ ಬೇಕೋ ಹಾಗೆ ಅರ್ಥೈಸಲಾಗುತ್ತಿದೆ. ಒಂದುರೀತಿಯಲ್ಲಿ ನಗೆಪಾಟಲಿಗೆ ಈಡಾಗಿರುವುದು ದುರದೃಷ್ಟಕರ. ಸಮಾಜವಾದ ಧರ್ಮ, ಜಾತಿ, ರಾಜಕಾರಣಗಳ ನಡುವೆ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಜಾಗತೀಕರಣ, ಉದಾರೀಕರಣಗಳ ನಡುವೆ ಸಮಾಜವಾದ ಉಸಿರು ಕಟ್ಟುವ ವಾತಾವರಣದಂತೆ ಕಂಡುಬಂದರೂ ಕೂಡ ಕೇವಲ ಅದರಿಂದ ಮಾತ್ರ ಅದು ಸೋಲು ಕಾಣಲಿಲ್ಲ. ಬಹುಶಃ ರಾಜಕೀಯ ಕಬಂಧ ಬಾಹುಗಳಿಗೆ ಸಿಕ್ಕಿ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.
ಉಳ್ಳವರೇ ಮೀಸಲಾತಿಗಳನ್ನು ಕೇಳುತ್ತಿರುವಾಗ ಸಮಾಜವಾದ ಅರಳುವುದಾದರೂ ಹೇಗೆ? ಸಾಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲುಜಾತಿಗಳೇ ಮೀಸಲಾತಿಗಾಗಿ ಬಡಿದಾಡುತ್ತಿವೆ. ಕೆಳಜಾತಿಯವರು ಕೇಳಲು ಕೂಡ ಧ್ವನಿ ಕಳೆದುಕೊಂಡಿದ್ದಾರೆ. ಆಳುವ ಸರ್ಕಾರಕಗಳು ವಿಶಿಷ್ಟವಾದ ಹೊಸ ಸಮಾಜವಾದವನ್ನು ಸೃಷ್ಟಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಇತಿಹಾಸ, ಸಮಾಜಶಾಸ್ತ್ರದಂತಹ ಪಠ್ಯಗಳೇ ಮರೆಯಾಗುತ್ತಿವೆ. ಆಹಾರ, ತೊಡುವ ಬಟ್ಟೆಗಳು ಕೂಡ ನಿಯಂತ್ರಣಕ್ಕೆ ಒಳಪಟ್ಟಿವೆ. ಇವುಗಳ ನಡುವೆ ಸಮಾಜವಾದದ ಸಿದ್ಧಾಂತಗಳೇ ಮರುಚಿಂತನೆಗಳಿಗೆ ಒಳಗಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಕೆ.ಬಿ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಶಫಿವುಲ್ಲಾ ಕೆ., ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್.ನಾಗರಾಜ್ ಉಪಸ್ಥಿತರಿದ್ದರು.
ಡಾ. ಹೆಚ್.ಎಂ. ಶಂಭುಲಿಂಗಮೂರ್ತಿ ನಿರೂಪಿಸಿದರು