ಶಿವಮೊಗ್ಗ,ಜ.06:
ಇಲ್ಲಿನ ದುರ್ಗಿಗುಡಿ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯ ಶಿಕ್ಷಕಿ ಹಾಗೂ ಲೇಖಕಿ ದೀಪಾ ಕುಬಸದ್ ಅವರ ಮಹಿಳಾ ಸಾಧಕಿಯರನ್ನು ಒಳಗೊಂಡ ಲೇಖನಗಳ ಕೃತಿ ” ಸಿಹಿಮೊಗೆಯ ಸಾಲು ದೀಪಗಳು” ಪುಸ್ತಕ ಬಿಡುಗಡೆ ಹಾಗೂ ಶಿವಮೊಗ್ಗದಲ್ಲಿ ಆರಂಭಗೊಂಡಿರುವ ನೂತನ ಪ್ರಕಾಶನ ಅಭ್ಯುದಯ ಸಂಸ್ಥೆಯ ಉದ್ಘಾಟನಾ ಸಮಾರಂಭ ಜನವರಿ 9ರ ಸೋಮವಾರ ಸಂಜೆ 5 ಗಂಟೆಗೆ ಇಲ್ಲಿನ ಕರ್ನಾಟಕ ಸಂಘದಲ್ಲಿ ನಡೆಯಲಿದೆ.
ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡ ಸುಮಾರು 60 ಮಹಿಳಾ ಸಾಧಕಿಯರ ಅಂಕಣ ಸಿಹಿಮೊಗೆಯ ಸಾಧಕ ಮಹಿಳಾ ಮಣಿಗಳು ಎಂಬ ಹೆಸರಿನಲ್ಲಿ ಪ್ರಕಟಗೊಂಡಿದ್ದವು. ಅವುಗಳನ್ನು ಕ್ರೂಢೀಕರಿಸಿ ಲೇಖಕಿ ದೀಪಾ ಅವರು ಈ ಕೃತಿಯನ್ನು ಹೊರತಂದಿದ್ದಾರೆ.
ಅಭ್ಯುದಯ ಪ್ರಕಾಶನವನ್ನು ಸಂಸದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ. ಕೃತಿಯನ್ನು ಮಕ್ಕಳ ಹೃದಯ ತಜ್ಞೆ ಹಾಗೂ ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಬಿಡುಗಡೆ ಮಾಡಲಿದ್ದಾರೆ. ಸರ್ಜಿ ಸಮೂಹ ಸಂಸ್ಥೆಯ ಎಂ.ಡಿ. ಡಾ. ಧನಂಜಯ ಸರ್ಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತ ಮನಸುಗಳನ್ನು ಲೇಖಕಿ ದೀಪಾ ಹಾಗೂ ಅಬ್ಯುದಯ ಪ್ರಕಾಶನದ ಪ್ರಕಾಶಕ ತುರುವನೂರು ಮಲ್ಲಿಕಾರ್ಜುನ್ ಎಂ.ಎ. ಸ್ವಾಗತಿಸಿದ್ದಾರೆ.