ಮತದಾರರನ್ನು ಓಲೈಸಲು ಶಾಸಕ ಕೆ.ಎಸ್. ಈಶ್ವರಪ್ಪ ತೀರ್ಥಯಾತ್ರೆಗೆ ಕಳುಹಿಸುತ್ತಿದ್ದಾರೆ. ಯಾವುದೋ ಹಣದಿಂದ ಯಾತ್ರೆಗೆ ಕಳುಹಿಸಿದರೆ ದೇವರು ಮೆಚ್ಚುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ವ್ಯಂಗ್ಯವಾಡಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಸಮಯ ಬರುತ್ತಿದೆ. ಈಶ್ವರಪ್ಪ ಭಕ್ತಿಯನ್ನು ಮತವನ್ನಾಗಿ ಮಾರ್ಪಡಿಸಲು ಹೊರಟಿದ್ದಾರೆ. ಸಾವಿರಾರು ಮತದಾರರನ್ನು ಓಂ ಶಕ್ತಿಯ ಹೆಸರಿನಲ್ಲಿ ತೀರ್ಥಕ್ಷೇತ್ರಕ್ಕೆ ಕಳುಹಿಸುತ್ತಿದ್ದಾರೆ. ಹೀಗೆ ಕಳುಹಿಸುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಅಕಸ್ಮಾತ್ ಕಳಿಸುವುದೇ ಆದರೆ ಶಿವಮೊಗ್ಗದ ಎಲ್ಲಾ ಧರ್ಮದವರ್ನು ಅವರವ

ರ ಧರ್ಮಕ್ಷೇತ್ರಕ್ಕೆ ಯಾತ್ರೆಗೆ ಕಳುಹಿಸಲಿ. ಆಗ ಅವರನ್ನು ಒಪ್ಪಿಕೊಳ್ಳಬಹುದು. ಆದರೆ ಸ್ವಾರ್ಥದ ಭಕ್ತಿಯನ್ನು ದೇವರು ಮೆಚ್ಚನು ಎಂದರು.
ಈಶ್ವರಪ್ಪನವರಿಗೆ ಸಿದ್ದರಾಮಯ್ಯನವರದ್ದೇ ಚಿಂತೆ. ಅವರು ಅಲೆಮಾರಿಯಂತೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಇವರಿಗೆ ಸಿದ್ದರಾಮಯ್ಯನವರ ಚಿಂತೆ ಏಕೆ? ಕಾಂಗ್ರೆಸ್ ಹೈಕಮಾಂಡ್ ಆಬಗ್ಗೆ ಯೋಚಿಸುತ್ತೆ. ಮತ್ತು ಸ್ವತಃ ಸಿದ್ದರಾಮಯ್ಯನವರೇ ಆಬಗೆ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದ ಎಲ್ಲಾ ೨೨೪ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ತಾಕತ್ತು ಸಿದ್ದರಾಮಯ್ಯನವರಿಗೆ ಇದೆ. ಈಶ್ವರಪ್ಪನವರಿಗೆ ನಿಜವಾಗಿಯೂ ಆ ತಾಕತ್ತಿದ್ದರೆ ಸಿದ್ದರಾಮಯ್ಯ ಅವರ ವಿರುದ್ಧ ನಿಂತು ಗೆಲುವು ಸಾಧಿಸಲಿ ಎಂದರು.
ಈಶ್ವರಪ್ಪನರಿಗೆ ತಮ್ಮ ಕ್ಷೇತ್ರದ ಬಗ್ಗೆಯೇ ಇನ್ನೂ ಗ್ಯಾರಂಟಿ ಇಲ್ಲ. ಈಗಾಗಲೇ ಟಿಕೆಟ್ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜೊತೆಗೆ ಟಿಕೆಟ್ ಸಿಕ್ಕರೂ ಸೋಲುವ ಭಯವಿದೆ. ಅವರು ಬಿ.ಎಸ್. ಯಡಿಯೂರಪ್ಪ ಅವರ ನೆರವಿಲ್ಲದೆ ಇಲ್ಲಿ ಗೆಲ್ಲುವುದು ಅಸಾಧ್ಯ. ಆದರೂ ಕೂಡ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಧರ್ಮಗಳ ನಡುವೆ ಅಶಾಂತಿ ಹುಟ್ಟಿಸಿ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದರಲ್ಲಿ ಬಿಜೆಪಿಯಲ್ಲೇ ಇವರದ್ದು ಎತ್ತಿದ ಕೈ. ಇಷ್ಟೆಲ್ಲರ ನಡುವೆಯೂ ಟಿಕೆಟ್ಗಾಗಿ ಹಂಬಲಿಸುತ್ತಿರುವುದು ಮುಗ್ಧ ಜನರಿಗೆ ಭಕ್ತಿಯ ಹೆಸರಲ್ಲಿ ಮೋಸ ಮಾಢುವುದು ಸರಿಯಲ್ಲ. ಈಶ್ವರಪ್ಪ ಅವರನ್ನು ಇದೇ ಮತದಾರರು ಚುನಾವಣೆಯಲ್ಲಿ ಸೋಲಿಸುವ ಮೂಲಕ ತೀರ್ಥಯಾತ್ರೆಗೆ ಹೋಗುವಂತೆ ಮಾಡುತ್ತಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್ ಫರ್ನಾಂಡಿಸ್, ಲಾರೆನ್ಸ್ ಡಿಸೋಜಾ, ಹಮೀದ್, ಹೆಚ್.ಪಿ. ರುದ್ರೇಶ್, ಬಾಷಾ ಇದ್ದರು.
