ಶಿವಮೊಗ್ಗ ನಗರ ಶಾಸಕ ಕೆ.ಎಸ್.ಈಶ್ವರಪ್ಪನವರು ಮಂತ್ರಿಪದವಿಗಾಗಿ ತಮ್ಮದೇ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವುದು ಬಿಟ್ಟು ಸದನಕ್ಕೆ ಹಾಜರಾಗಿ ಶಿವಮೊಗ್ಗ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿ ಪರಿಹಾರ ನೀಡಲಿ ಎಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರರಾದ ಕೆ.ಬಿ.ಪ್ರಸನ್ನ ಕುಮಾರ್ ಹೇಳಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಶಾಸಕರು ಸದನದಲ್ಲಿ ಕಾಣುತ್ತಿಲ್ಲ. ನಿನ್ನೆ ಬೆಳಗಾಂನಲ್ಲಿ ಮಂತ್ರಿ ಪದವಿ ನೀಡಿಲ್ಲ ಎಂದು ಮೌನ ಪ್ರತಿಭಟನೆ ಎಂದರು. ನಂತರ ನಾನು ಬಿಎಸ್‌ವೈ ಮತ್ತು ಅನಂತ್‌ಕುಮಾರ್ ಸೇರಿ ಪಕ್ಷ ಕಟ್ಟಿದ್ದೇವೆ. ಪೊಲೀಸರು ಕ್ಲೀನ್‌ಚಿಟ್ ನೀಡಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ನನ್ನನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ. ಆದ್ದರಿಂದ ನಾನು ಅಧಿವೇಶನಕ್ಕೆ ಹೋಗುವುದಿಲ್ಲ ಎಂದರು.


ಮತ್ತೆ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ.ಅವರಿಗೆ ಅಭಿನಂದನೆ ಎಂದರು. ಒಟ್ಟಾರೆಯಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಾ ಪಕ್ಷವನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಸದನಕ್ಕೆ ಹಾಜರಾದರೆ ೪೦% ಆರೋಪ ಮತ್ತೆ ಸದನದಲ್ಲಿ ಚರ್ಚೆಗೆ ಬರುತ್ತದೆ ಎಂಬ ಭಯದಿಂದ ಇವರು ಅಧಿವೇಶನಕ್ಕೆ ಗೈರಾಗಿದ್ದಾರೆ ಎಂಬ ಸಂಶಯ ನಗರದ ಜನತೆಗೆ ಕಾಡುತ್ತಿದೆ ಎಂದರು.


ಇದು ಶಿವಮೊಗ್ಗ ನಗರ ಜನತೆಗೆ ಶಾಸಕರು ಮಾಡುತ್ತಿರುವ ದ್ರೋಹ. ಕರೋನಾದಿಂದ ೨ ವರ್ಷಗಳ ಕಾಲ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ನಾಗರೀಕರು ತಮ್ಮ ಸಮಸ್ಯೆ ಬಗೆಹರಿಸಲು ಒದ್ದಾಡುತ್ತಿದ್ದಾರೆ. ಮೆಗ್ಗಾನ್‌ನಲ್ಲಿ ಕ್ಯಾನ್ಸರ್ ಆಪರೇಷನ್ ಮಾಡಿದರೆ ಕಿಮಿಯೋಥೆರಪಿಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ರೋಗಿಗಳಿಗೆ ಹೇಳುತ್ತಾರೆ

. ಸಮಸ್ಯೆಯನ್ನು ಶಾಸಕರಲ್ಲಿ ಹೇಳೋಣವೆಂದರೆ ಶಾಸಕರು ಮಂತ್ರಿಗಿರಿಗಾಗಿ ಓಡಾಟದಲ್ಲಿದ್ದಾರೆ. ಇವರ ಮಾತನ್ನು ಯಾವ ಅಧಿಕಾರಿಯು ಕೇಳುತ್ತಿಲ್ಲ. ಆಶ್ರಯ ಮನೆಗಳು ಇನ್ನು ಹಂಚಿಕೆಯಾಗಿಲ್ಲ. ಪುರಾತನ ದೇವಸ್ಥಾನ ಞಗಳು ಹಾಳು ಬಿದ್ದುಹೋಗಿದೆ. ೨ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮತ್ತು ಹಾನಿಗೀಡಾದವರಿಗೆ ಇನ್ನು ಪರಿಹಾರ ಸಿಗದೆ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.


ಶಾಸಕರು ಕೂಡಲೆ ಅಧಿವೇಶನದಲ್ಲಿ ಪಾಲ್ಗೊಂಡು ಶಿವಮೊಗ್ಗ ಜನತೆಯ ಗೌರವ ಹೆಚ್ಚಿಸಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ ಕೈಗೊಳ್ಳಲಿದೆ ಎಂದರು. ಇಡಿ, ಐಟಿ, ಸಿಬಿಐಗಳನ್ನು ಬಿಜೆಪಿ ತನ್ನ ಮೋರ್ಚಾ ಮಾಡಿಕೊಂಡಿದೆ. ಕಾಂಗ್ರೆಸ್ ಬೆಂಬಲಿಗರ ಮೇಲೆ ರೈಡ್ ಮಾಡಿಸುವುದು, ನೋಟಿಸ್ ನೀಡುವುದು, ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ನಾಯಕರ ಕೋಟಿಗಟ್ಟಲೆ ಆಸ್ತಿ ಬಗ್ಗೆ ಈ ಸಂಸ್ಥೆಗಳು ಚಕಾರವೆತ್ತಿಲ್ಲ. ತನಿಖೆಯೂ ನಡೆಸಿಲ್ಲ. ದೂರು ಕೊಟ್ಟರು ಯಾವುದೇ ಕ್ರಮಕೈಗೊಂಡಿಲ್ಲ. ಈಗ ದೇಶದ ಜನತೆಗ ಈ ೩ ಸಂಸ್ಥೆಗಳ ಪಾರದರ್ಶಕತೆಯ ಮೇಲೆ ಸಂಶಯ ಉಂಟಾಗಿದೆ ಎಂದರು.


ಈಶ್ವರಪ್ಪನವರಿಗೆ ಕ್ಲೀನ್‌ಚಿಟ್ ನೀಡಿರುವುದು ಇವರದ್ದೇ ಸರ್ಕಾರದ ಪೊಲೀಸ್ ತನಿಖೆಯಲ್ಲಿ ಮಾತ್ರ. ಆದರೆ ನ್ಯಾಯಾಲಯ ಇನ್ನು ಕ್ಲೀನ್‌ಚಿಟ್ ನೀಡಿಲ್ಲ. ತಮ್ಮ ತಪ್ಪನ್ನು ಮುಚ್ಚಲು ಮಂತ್ರಿಗಿರಿಯ ಬ್ಲಾಕ್‌ಮೇಲ್ ಮಾಡುತ್ತ ಬ್ಯಾಲೆನ್ಸ್ ಮಾಡಲು ಹೊರಟ್ಟಿದ್ದಾರೆ. ಅವರ ಪಕ್ಷದವರೆ ಸದನಕ್ಕೆ ಗೈರಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೆ ಸದನಕ್ಕೆ ಹಾಜರಾಗಿ ಸರ್ಕಾರದ ಗಮನ ಸೆಳೆಯಲಿ ಎಂದರು.


ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಆರ್.ಸಿ.ನಾಯಕ್, ಮಾಜಿ ಸದಸ್ಯರಾದ ಶ್ಯಾಮ್ ಸುಂದರ್, ದೀಪಕ್‌ಸಿಂಗ್, ಲಕ್ಷ್ಮಣ್, ಮಂಜುನಾಥ್ ಬಾಬು, ಶಿವಾನಂದ್, ಶಣ್ಮುಖ, ಸಲೀಂ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!