ಶಿವಮೊಗ್ಗ: ನಾನೂ ಸಹ ಇನ್ನೊಂದು ಪಕ್ಷದಲ್ಲಿದ್ದವನು. ಆ ಪಕ್ಷದಲ್ಲಿ ಅಸಮಾಧಾನ ಇದ್ದಿದ್ದರಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಇದು ಹೇಗೆ ಆಪರೇಷನ್ ಕಮಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿ ಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಇನ್ನೂ ೨೫ ವರ್ಷಗಳ ಕಾಲ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಆಡಳಿತ ನಡೆಸಲಿದೆ. ಬಿಜೆಪಿ ಸಿದ್ಧಾಂತವನ್ನ ಮೆಚ್ಚಿ ಪಕ್ಷಕ್ಕೆ ಬರುತ್ತಾರೆ.

ನಾನು ಬಂದ ಬಳಿಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರು. ಈಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅದನ್ನು ನೋಡಿ ಮೆಚ್ಚಿ ಬರುವವರಿಗೆ ಬರಬೇಡಿ ಅನ್ನಲು ಆಗುತ್ತದೆಯೇ ಎಂದರು.

ಶಿವಮೊಗ್ಗ ನಗರದಲ್ಲಿ ಕಿಡಿಗೇಡಿಗಳಿಂದ ಶಾಂತಿಭಂಗ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಇನ್ನುಮುಂದೆ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ತಿಳಿಸಿದರು.
ನಗರದಲ್ಲಿ ಶಾಂತಿಭಂಗ ಹೆಚ್ಚಾಗುತ್ತಿರುವ ಬಗ್ಗೆ ನಿನ್ನೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಯಾವರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಚರ್ಚೆ ನಡೆದು, ಇನ್ನುಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.

ನಟ ದಿ. ಪುನೀತ್ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ. ಈ ಪ್ರಶಸ್ತಿ ನೀಡುವುದೂ ಸಹ ಅವರ ಕುಟುಂಬಕ್ಕೆ ಅಗತ್ಯವಿತ್ತು. ಸರ್ಕಾರ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.

ಏಕನಾಗರಿಕ ಸಂಹಿತೆ ಜಾರಿಗೆ ಚರ್ಚೆ ನಡೆಯುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು, ಈಬಗ್ಗೆ ಸಚಿವ ಸಂಪುಟದಲ್ಲಿ ಹಾಗು ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕಾಗಿದೆ.

ಚುನಾವಣಾ ಸಂದರ್ಭದಲ್ಲಿ ಇಂತಹ ಚರ್ಚೆಗಳು ವಿರೋಧ ಪಕ್ಷಗಳು ಮಾಡಿ ಪ್ರಚಾರ ಗಿಟ್ಟಿಸುತ್ತಿವೆ. ಆದರೆ ಸರ್ಕಾರ ಒಳ್ಳೆಯ ಯೋಜನೆಗಳ ಜಾರಿಗೆ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತದೆಯೇ ಹೊರತು ಇಂತಹ ಚರ್ಚೆಯ ವಿಷಯದಲ್ಲಿ ಸಮಯ ಹಾಳುಮಾಡುವುದಿಲ್ಲ ಎಂದರು.