ಭದ್ರಾವತಿ.ಅ.27:
ಗ್ರಾಮಾಂತರ ಠಾಣೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಸುಲಿಗೆ ಮತ್ತು ಕನ್ನಕಳವು ಪ್ರಕರಣಗಳಲ್ಲಿ ಆರೋಪಿತರು ಹಾಗೂ ಕಳುವಿನ ಮಾಲಿನ ಪತ್ತೆಗಾಗಿ ಪಿಐ, ಭದ್ರಾವತಿ ಗ್ರಾಮಾಂತರ ಮತ್ತು ಪಿಎಸ್’ಐ ಹಾಗೂ ಸಿಬ್ಬಂದಿಗಳ ತಂಡವನ್ನು ನೇಮಕ ಮಾಡಲಾಗಿತ್ತು.

ತನಿಖೆ ಕೈಗೊಂಡ ಅಧಿಕಾರಿಗಳ ತಂಡ ತಾರಿಕಟ್ಟೆ ಗ್ರಾಮದ ಸತ್ಯಾನಂದ ಸ್ನೇಕ್ ಸತ್ಯ(22), ಮೂಲೆಕಟ್ಟೆ ಗ್ರಾಮದ ಬಾಬು ಟಿ. ಜೋಶ್ವಾ(19), ವೆಂಕಟೇಶ್ ಖರಾಬ್ ಬೆಳ್ಳಿ(22) ಅವರುಗಳನ್ನು ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯಲ್ಲಿ ಬಂಧಿಸಿದ್ದಾರೆ.
ಆರೋಪಿತರಿಂದ ಭದ್ರಾವತಿ ಗ್ರಾಮಾಂತರ ಠಾಣೆಯ 2, ಪೇಪರ್ ಟೌನ್ ಠಾಣೆಯ 1 ಸುಲಿಗೆ ಪ್ರಕರಣ ಹಾಗೂ ಭದ್ರಾವತಿ ಗ್ರಾಮಾಂತರ ಠಾಣೆಯ 1 ಸ್ವತ್ತು ಕಳವು ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು ರೂ 1,75,000 ಮೌಲ್ಯದ 36 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ರೂ 30,000 ರೂ ಮೌಲ್ಯದ 2 ಮೊಬೈಲ್ ಪೋನ್’ಗಳು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ, ಕೃತ್ಯಕ್ಕೆ ಬಳಸಿದ್ದ 1,60,000 ರೂ ಮೌಲ್ಯದ 2 ಬೈಕ್ ಗಳು ಹಾಗೂ ಒಂದು ಡ್ರಾಗರ್ ಚಾಕು ಸೇರಿ ಒಟ್ಟು 3,65,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿಐ, ಭದ್ರಾವತಿ ಗ್ರಾಮಾಂತರ ಮತ್ತು ಪಿಎಸ್’ಐ ಹಾಗೂ ಸಿಬ್ಬಂದಿಗಳ ತಂಡದ ಈ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.
