ಶಿವಮೊಗ್ಗ, ಅ.25:
(ಇದು ತುಂಗಾತರಂಗ ಸ್ಪೆಷಲ್ ಸುದ್ದಿ)
ಕೆಲವರಿಗೆ ದಿಡೀರನೆ ಬೆಳೆದು ಬಿಡಬೇಕು. ನಾಯಕರಾಗಬೇಕು. ತಾವೇ ಹೀರೋ ಅಥವಾ ಹೀರೋಯಿನ್ ಎಂದುಕೊಳ್ಳಬೇಕು.

ಒಟ್ಟಾರೆ ಏನಾದರೂ ಆಗಲಿ, ಒಟ್ಟು ತಾವು ಒಳ್ಳೆಯದೋ, ಕೆಟ್ಟದ್ದೋ ಗೊತ್ತಿಲ್ಲ. ಹೀರೋ ಆಗ್ಬಿಡ್ಬೇಕು ಇಂತಹ ಕೆಟ್ಟ ತಯಾರಿಗಳೇ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಇತ್ತೀಚಿನ. ಅಹಿತಕರ ಘಟನೆಗಳಿಗೆ ಮೂಲ ಪ್ರೇರಕ ಹಾಗೂ ಪೂರಕ ಎಂದು ಅಂದಾಜಿಸಲಾಗುತ್ತದೆ.

ಇದು ತುಂಗಾತರಂಗ ಪತ್ರಿಕೆಯ ಆರೋಪವಲ್ಲ. ಇತ್ತೀಚಿನ ದಿನಗಳ ಅವಧಿಯಲ್ಲಿ ಶಿವಮೊಗ್ಗ ನಗರದ ಬಹುತೇಕ ಗಲಾಟೆ ಹಾಗೂ ಗದ್ದಲಗಳನ್ನು ಅವಲೋಕಿಸಿದಾಗ ಒಂದಿಷ್ಟು ನೋಡಿದಾಗ ಯಾವುದೋ ಘಟನೆಗಳನ್ನು ತೆಗೆದುಕೊಂಡು ತಾವೇ ಮುಂದೆ ಹೀರೋಗಳಂತೆ ವರ್ತಿಸುವ ಜೊತೆಗೆ ಹಿಂದಿನ ಘಟನೆಯ ಕಷ್ಟ ನಷ್ಟ, ಸಾವು ನೋವುಗಳ ಬಗ್ಗೆ ಚಿಂತಿಸದಿರುವುದು ಎದ್ದು ಕಾಣುತ್ತಿದೆ.

ಇಲ್ಲಿ ವ್ಯಕ್ತಿಗತವಾಗಿ ತಾವೇ ಹೀರೋ ಅಂದರೆ ಮುಂದಿನ ಬಾವಿ ನಾಯಕರು ಎಂಬಂತೆ ಬಿಂಬಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಶಿವಮೊಗ್ಗ ನಗರದಲ್ಲಿ ಹರ್ಷ ಕೊಲೆ ಹತ್ಯೆ ಪ್ರಕರಣದ ನಂತರ ಆದ ಬೆಳವಣಿಗೆಗಳನ್ನು ಒಮ್ಮೆ ಅವಲೋಕಿಸಬೇಕು ನಂತರ ಹಿಂದೂ ಮುಸ್ಲಿಂ ಎಂಬ ಹೆಸರನ್ನು ಬಳಸಿಕೊಳ್ಳುವ ಕೆಲ ಮತಾಂದರು ಈ ಕೊಲೆ ಪ್ರಕರಣದ ಬೆನ್ನಲ್ಲಿ ತಾವು ನಾಯಕರಾಗಲು ಹೊರಟಿದ್ದು ಎಲ್ಲರಿಗೂ ತಿಳಿದಿರುವ ಸತ್ಯವೇ ಹೌದು.

ಅನಗತ್ಯವಾಗಿ ಕೆಲವೇ ಕೆಲವು ದುಷ್ಟ ಮನಸ್ಥಿತಿಗಳು ಗಲಭೆಗಳನ್ನು ಸೃಷ್ಟಿಸಿ ಇಡೀ ನಗರದ ನೆಮ್ಮದಿಯ ವಾತಾವರಣಗಳನ್ನು ಹಾಳು ಮಾಡುತ್ತಿರುವುದು ದುರಂತವಲ್ಲದೆ ಮತ್ತಿನ್ನೇನು? ಬರುವ ಚುನಾವಣೆಯವರೆಗೂ ಕನಸು ಕಟ್ಟಿಕೊಂಡು ನಾಯಕರಾಗಲು ಹೊರಟವರು ಒಂದು ಕಡೆಯಾದರೆ, ಮತ್ತೊಂದು ಕಡೆ ಮತಾಂದತೆಯ ಕೂಪದಲ್ಲಿ ಸಿಲುಕಿ ಅನಗತ್ಯ ಗಲಾಟೆಗಳನ್ನು ಸೃಷ್ಟಿಸುತ್ತಿರುವುದು ಇಲ್ಲಿ ಆತಂಕ ತರುತ್ತಿರುವ ಸಂಗತಿ.

ಆದರೆ ಅದಕ್ಕಿಂತಲೂ ಮಿಗಿಲಾದ ಸಂಗತಿ ಒಂದನ್ನು ಜನ ಅವಲೋಕಿಸುತ್ತಿದ್ದಾರೆ. ಮುಂದಿನ ನಾಯಕರ ಆಯ್ಕೆ ಜನರ ನಿರ್ಧಾರ ಆಗಿದೆಯೇ ಹೊರತು ಯಾವುದೇ ಗಲಭೆಗಳಿಗೆ, ಧರ್ಮಗಳ ವಿಷಯಗಳಿಗೆ ಹಾಗೂ ಹಿಂಸೆಗಳಿಗೆ ಬಲಿಯಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಏಕೆಂದರೆ ಶಿವಮೊಗ್ಗ ಪ್ರಜ್ಞಾವಂತ ಹಾಗೂ ಸರಳ ಸಹಜ ಸಂಸ್ಕೃತಿಯ ಜನರನ್ನೇ ಹೆಚ್ಚಾಗಿ ಹೊಂದಿದೆ ಅಲ್ಲವೇ?
ಯಾವುದೇ ಕಾರಣಕ್ಕೂ ಶಿವಮೊಗ್ಗದ ಇಂತಹ ದಿಡೀರ್ ಹೀರೋಯಿಸಂ ನೆಪದ ನಾಯಕರನ್ನು ಅದು ಸ್ವಯಂಘೋಷಿತ ನಾಯಕರನ್ನು ರಕ್ಷಣಾ ಇಲಾಖೆ ಯಾವುದೇ ಮುಲಾಜಿಲ್ಲದೆ ಹತ್ತಿಕ್ಕಬೇಕಿದೆ ಎಂಬುದು ಸಾರ್ವಜನಿಕ ಒತ್ತಾಯ.
