ಶಿವಮೊಗ್ಗ, ದಾರಿ ತಪ್ಪುತ್ತಿರುವ ಮುಸ್ಲಿಂ ಯುವಕರನ್ನು ಅವರ ಸಮುದಾಯದ ಹಿರಿಯರು ಹದ್ದುಬಸ್ತಿನಲ್ಲಿ ಇಡದಿದ್ದರೆ ಅವರು ರಾಷ್ಟ್ರದ್ರೋಹಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಸ್ಲಿಂ ಹಿರಿಯರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಡಿ.ಪಿ.ಐ., ಪಿಎಫ್‌ಐ ಮುಂತಾದ ಸಂಘಟನೆಗಳು ರಾಷ್ಟ್ರದ್ರೋಹದ ಸಂಘಟನೆಗಳಾಗಿ ಹೊರ ಹೊಮ್ಮುತ್ತಿವೆ. ಬಿಜೆಪಿ ಇಂತಹ ಸಂಘಟನೆಗಳ ಬಗ್ಗೆ ಹುಷಾರಾಗಿರಬೇಕೆಂದು ಆಗಾಗ ಎಚ್ಚರಿಸುತ್ತಾ ಬಂದಿದೆ. ಆದರೂ, ಮುಸ್ಲಿಂ ಯುವಕರು ಪ್ರಚೋದನೆಗೆ ಒಳಗಾಗಿ ಐಎಸ್‌ಐ ಉಗ್ರ ಸಂಘಟನೆಗೆ ಸೇರುತ್ತಿದ್ದಾರೆ.
ಇದು ತುಂಬಾ ಅಪಾಯಕಾರಿ ಎಂದರು.
ಮುಸ್ಲಿಂ ಸಮಾಜದ ಹಿರಿಯರು ಇವರನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ. ಇಲ್ಲದಿದ್ದರೆ ಇವರು ಬಾಂಬ್ ತಯಾರಿಸಿಯೋ ಅಥವಾ ತರಬೇತಿ ಪಡೆದೋ, ಚಾಕು ಚೂರಿ ಸಂಸ್ಕೃತಿ ಹೊಂದಿ ರಾಷ್ಟ್ರದ್ರೋಹಿಗಳಾಗಿ, ಭಯೋತ್ಪಾದಕರಾಗಿ ಜೈಲು ಸೇರುವುದು ಖಚಿತ. ಇಂತಹ ಸಂಘಟನೆಗಳಿಗೆ ವಿದೇಶಗಳಿಂದ ಕೋಟ್ಯಂತರ ರೂ. ಹರಿದು ಬರುತ್ತಿದೆ ಎಂದರು.
ಈಗಾಗಲೇ ಎನ್‌ಐಎ ವಿಶೇಷ ನ್ಯಾಯಾಲಯ ಸೆ. ೨೧ ರಂದು ತನಿಖೆಗೆ ಆದೇಶ ನೀಡಿ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಏಕಕಾಲದಲ್ಲಿ ದೇಶಾದ್ಯಂತ ದಾಳಿ ನಡೆದಿದ್ದು, ದುಷ್ಕೃತ್ಯಗಳು ಹೊರ ಬಂದಿವೆ.
ಇಂತಹ ದುಷ್ಕೃತ್ಯಗಳು ನಡೆಯುತ್ತಿದ್ದರೂ ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡ ಇದು ತಪ್ಪು ಎಂದು ಹೇಳಿಲ್ಲ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಯುವಕರಿಗೆ ಉದ್ಯೋಗವಿಲ್ಲ. ಹಾಗಾಗಿ ಬಾಂಬ್ ತಯಾರು ಮಾಡುತ್ತಾರೆ ಎಂದು ಹೇಳುವ ಮೂಲಕ ಇಂತಹ ಸಂಘಟನೆಗಳಿಗೆ ಬೆಂಬಲ ನೀಡಿದರೆ ಇದು ತಪ್ಪು ಎಂದು ಕಾಂಗ್ರೆಸ್ ಮುಖಂಡರು ಹೇಳಿಲ್ಲ ಎಂದರು.