ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುವ ಹಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿತ ಇಲಾಖಾಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿ ಯೋಜನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ಮತ್ತು ಐಐಹೆಚ್‌ಎಂಆರ್. ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯ ಕೊಡಚಾದ್ರಿ ಸಭಾಂಗಣದಲ್ಲಿ ಸಂವಹನದಲ್ಲಿನ ಸವಾಲುಗಳು ಮತ್ತು ಸಮುದಾಯ ನಿರ್ವಹಣಾ ಚಟುವಟಿಕೆಗಳು, ಸ್ವಚ್ಚತೆ, ಪೌಷ್ಠಿಕತೆ ಮತ್ತು ಸುರಕ್ಷತೆ ಕುರಿತು ವಿವಿಧ ಇಲಾಖಾ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಯೋಜನೆಗಳ ವ್ಯವಸ್ಥಿತ ಅನುಷ್ಠಾನದಲ್ಲಿ ಪ್ರತಿ ಇಲಾಖೆಗಳ ನಡುವೆ ಒಂದಿಲ್ಲೊಂದು ಕಾರಣಕ್ಕಾಗಿ ಸಂಬಂಧಗಳಿರುತ್ತವೆ. ಇಲಾಖಾ ಯೋಜನೆಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳುವಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಅದಕ್ಕೆ ಜನರಲ್ಲಿ ಅರಿವಿನ ಕೊರತೆಯೂ ಕಾರಣವಾಗಿದೆ. ಆದ್ದರಿಂದ ಇಲಾಖಾ ಅಧಿಕಾರಿಗಳು ಈ ವಿಷಯದ ಕುರಿತು ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ. ಗ್ರಾಮೀಣ ಜನರಲ್ಲಿ ಸ್ವಚ್ಚತೆ, ಆರೋಗ್ಯ, ನೈರ್ಮಲ್ಯ, ಅಪೌಷ್ಠಿಕತೆ ಕುರಿತು ಮಾಹಿತಿ ನೀಡಬೇಕಾದ ಅಗತ್ಯವಿದೆ. ಅಲ್ಲದೇ ವಿಶೇಷವಾಗಿ ತಾಯಿ ಮಕ್ಕಳ ಆರೋಗ್ಯ ಸುರಕ್ಷತವಾಗಿರುವಲ್ಲಿ ಲಸಿಕೆಗಳು ನಿರಂತವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಇವುಗಳಿಂದಾಗಿ ಯೋಜನೆಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿವೆ ಎಂದವರು ನುಡಿದರು.


ದಶಕಗಳ ಹಿಂದೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂಧಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮನೆಮನೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದರು. ಅಪೌಷ್ಠಿಕತೆ ನಿವಾರಣೆ ಜಿಲ್ಲೆಯಲ್ಲಿ ಸವಾಲಿನ ಕೆಲಸವೆನಿಸಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಅಪೌಷ್ಠಿಕ ಮಕ್ಕಳ ಸುರಕ್ಷತೆಗೆ ಗಮನಹರಿಸಲಾಗಿದೆ. ಇವೆಲ್ಲವುಗಳ ಪರಿಹಾರದ ಮೊದಲ ಮಂತ್ರ ವೈಯಕ್ತಿಕ ಶುಚಿತ್ವ ಮತ್ತು ಸುರಕ್ಷತೆಗೆ ಗಮನಹರಿಸಬೇಕು ಎಂದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುನಿಸೆಫ್ ರಾಜ್ಯ ಸಂಯೋಜಕ ಮನೋಜ್ ಸಬಾಸ್ಟಿಯನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಪರಿಣಿತಿ ಪಡೆದ, ನುರಿತ ಅನುಭವ ಹೊಂದಿದ ಅಧಿಕಾರಿ-ಸಿಬ್ಬಂಧಿಗಳಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು, ಅವರ ನಡುವೆ ಸಮನ್ವಯತೆಯ ಸೇತುವೆ ಕಲ್ಪಿಸಿದಲ್ಲಿ ಆಡಳಿತ ಹಾಗೂ ಅನುಷ್ಠಾನದಲ್ಲಿ ಯಶಸ್ಸು ದೊರೆಯಲಿದೆ ಎಂದರು.


ಎಲ್ಲಾ ಇಲಾಖೆಗಳಲ್ಲಿರುವ ಮಾಹಿತಿ, ತರಬೇತಿ, ಶಿಕ್ಷಣ ಪಡೆದವರನ್ನು ಒಂದೆಡೆ ಸೇರಿಸಿ, ಅವರಿಗೆ ಇನ್ನಷ್ಟು ತರಬೇತಿ ನೀಡಿದಲ್ಲಿ ಗ್ರಾಮೀಣ ಜನರನ್ನು ತಲುಪಲು ಸಾದ್ಯವಾಗಲಿದೆ. ಈ ಹಿಂದೆ ಕೊರೋನ ಸೋಂಕಿನ ನಿಯಂತ್ರಣ ಸಂದರ್ಭದಲ್ಲಿಯೂ ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಿದ್ದರಿಂದಲೇ ಸೋಂಕು ಹತೋಟಿಗೆ ಬರುವಲ್ಲಿ ಸಹಾಯಕವಾಗಿರುವುದು ದೃಢಪಟ್ಟಿದೆ ಎಂದರು. ಈ ತಂತ್ರವನ್ನು ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದಲ್ಲಿಯೂ ಬಳಸಿಕೊಳ್ಳಬಹುದಾಗಿದೆ ಎಂದರು.


ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಶ್ರೀಮತಿ ಜಯಲಕ್ಷ್ಮಮ್ಮ, ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ವಿಭಾಗೀಯ ಸಂಯೋಜಕ ಡಾ|| ರವೀಶ್ ಬಿ.ಗಣಿ ಸೇರಿದಂತೆ ವಿವಿಧ ಇಲಾಖೆಗಳ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ತರಬೇತುದಾರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!