ಶಿವಮೊಗ್ಗ,ಆ.22:
ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಕರಡಿ ದಾಳಿಗೆ ತುತ್ತಾದ ವ್ಯಕ್ತಿ ಸ್ಥಿತಿ ಗಂಭೀರವಾಗಿದೆ.
ಭದ್ರಾವತಿ ತಾಲೂಕು ದೊಡ್ಡೇರಿ ಅಂಚೆಯ ಬಾಳೆಕಟ್ಟೆ ಗ್ರಾಮದಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ನಡೆಸಿದೆ.
ಗ್ರಾಮದ ಜಾನು ಎಂಬಾತ ವ್ಯಕ್ತಿಯು ಬಹಿರ್ದೆಸೆಗೆ ತೆರಳಿದಾಗ ಕರಡಿ ದಾಳಿ ನಡೆಸಿದೆ ಎನ್ನಲಾಗಿದೆ.
ಕರಡಿ ದಾಳಿಗೆ ಆತನ ಮುಖದ ಬಲಭಾಗ ಗಂಭೀರವಾಗಿ ಗಾಯಗೊಂಡಿದೆ. ಕರಡಿಯ ಹಿಡಿತದಿಂದ ಜಾನು ತಪ್ಪಿಸಿಕೊಂಡು ಬಂದಿದ್ದರೂ ಸಹ ಆತನ ಸ್ಥಿತಿ ಗಂಭೀರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಂಜೆ 4-30 ರ ಸಮಯದಲ್ಲಿ ಭದ್ರಾವತಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಜಾನುನನ್ನ ಅಂಬ್ಯುಲೆನ್ಸ್ ಮೂಲಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾಡು ಪ್ರಾಣಿಗಳು ನಾಡಿನೊಳಗೆ ನುಗ್ಗುತ್ತಿರುವ ಘಟನೆ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.