ಶಿವಮೊಗ್ಗ,
ರೈತರಿಗೆ ವಿವಿಧ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡುವ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಬಸ್ ವ್ಯವಸ್ಥೆ ಮತ್ತು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿ ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬೆಳ್ಳೂರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕುಂದು ಕೊರತೆಯ ಅರ್ಜಿ ಸ್ವೀಕರಿಸಿ ಮಾತನಾಡಿದರು.
ಗ್ರಾಮಸ್ಥರಾದ ದೇವೇಂದ್ರಪ್ಪ ಮಾತನಾಡಿ, ಭತ್ತ, ಜೋಳ, ಶುಂಠಿ, ಕಬ್ಬು ಬೆಳೆಗೆಳಿಗೆ ವೈಜ್ಞಾನಿಕ ಬೆಲೆ ನಿಗದಿ, ಆರ್‌ಟಿಸಿ ಯಲ್ಲಿ ಹೆಸರು ಮತ್ತು ಬೆಳೆ ನಮೂದು, ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿ ಯಲ್ಲಿ ಭತ್ತ ರಾಗಿ ಗೋಧಿ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸುವಂತೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬೋರ್ಡೊ ಔಷಧಿಗೆ ಕಳೆದ ಬಾರಿ ಸಬ್ಸಿಡಿ ದೊರೆತಿಲ್ಲ, ೨೦೧೯ ರ ಆಗಸ್ಟ್‌ನಲ್ಲಾದ ಪ್ರವಾಹದಲ್ಲಿ ಹಾನಿಗೊಳಗಾ ದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ ಹಾಗೂ ಭತ್ತದ ನಾಟಿಯಲ್ಲಿ ಯಾಂತ್ರೀಕರಣದ ಸಹಾಯ, ಬಗರ್‌ಹುಕುಂ ಬೆಳೆಗಾರರಿಗೂ ಅಧಿಕೃತ ಬೆಳೆ ಮಾರಾಟ ವ್ಯವಸ್ಥೆ ದೊರಕಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ದರ ಸ್ಪರ್ಧೆ ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟಲು ಸಹಕಾರಿ ಕ್ಷೇತ್ರದ ಬಳಕೆ ಮಾಡಿಕೊಳ್ಳಬೇಕು. ನೀವು ಸಹಕಾರ ಸೊಸೈಟಿ ರಚಿಸಿದಲ್ಲಿ ನಾವು ಮೂಲಭೂತ ಸೌಕರ್ಯ ನೀಡುತ್ತೇವೆ. ಇನ್ನು ರೈತರು ಯಂತ್ರೋಪಕರಣ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಗ್ರಾ.ಪಂ ಮಟ್ಟದಲ್ಲೇ ಫ್ರೂಟ್ಸ್ (ಈಖUIಖಿS) ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ದಿನ ನಿಗದಿಪಡಿಸಿಕೊಂಡು ಎಲ್ಲ ರೈತರೂ ನೊಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.
ಗ್ರಾಮಸ್ಥರಾದ ಯೋಗೇಶ್ ಮಾತನಾಡಿ, ಬೆಳ್ಳೂರಿಗೆ ನ್ಯಾಯಬೆಲೆ ಅಂಗಡಿ ಮಂಜೂರು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಕ್ರಮ, ಕಾಲುಸಂಕ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿ ತೆರೆಯಲು ಅಧಿಸೂಚನೆ ಹೊರಡಿಸುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿ, ಬೆಂಬಲ ಬೆಲೆಯಡಿ ಬೆಳೆ ಖರೀದಿಸಲು ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಸಹಕರಿಸಬೇಕೆಂದರು.
ರಾಜಕುಮಾರ್ ಮಾತನಾಡಿ, ಶಾಲಾ-ಕಾಲೇಜು ಮಕ್ಕಳು ವಿದ್ಯಾಸಂಸ್ಥೆಗಳಿಗೆ ಹೋಗಿಬರಲು ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಈ ಹಿಂದೆ ಖಾಸಗಿ ಬಸ್ ಮಾರ್ಗ ಇದ್ದು, ಅವರು ನಡೆಸದಿದ್ದರೆ ಕೆಎಸ್‌ಆರ್‌ಟಿಸಿ ಬಸ್‌ಗೆ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.
ತಹಶೀಲ್ದಾರ್ ಗ್ರೇಡ್-೨ ರಾಕೇಶ್ ಫ್ರಾನ್ಸಿಸ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ರಾಜೀವ್ ಸ್ವಾಗತಿಸಿದರು, ಎಸಿ ನಾಗರಾಜ್, ಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರಾದ ತಿಮ್ಮಣ್ಣ ಬೆಳ್ಳೂರು, ಹೇಮಾವತಿ, ಪಲ್ಲವಿ, ಕವಿತ ತಾ,ಪಂ ಇಓ ಪ್ರವೀಣ್‌ಕುಮಾರ್, ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ಆರ್‌ಎಫ್‌ಓ, ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.