12 ರಿಂದ 14 ವರ್ಷದೊಳಗಿನ ಮಕ್ಕಳ ಲಸಿಕಾ ಗುರಿ ಸಾಧಿಸಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸೂಚನೆ

ಶಿವಮೊಗ್ಗ ಮಾ.30:
ಜಿಲ್ಲೆಯ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಶಾಲಾ ರಜೆ ನೀಡುವುದರ ಒಳಗೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 12-14 ಮಕ್ಕಳ ಕೋವಿಡ್ 19 ಲಸಿಕೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ನಮ್ಮ ಜಿಲ್ಲೆಯಲ್ಲಿ 12 ರಿಂದ 14 ವರ್ಷದ 53 ಸಾವಿರ ಮಕ್ಕಳನ್ನು ಲಸಿಕೆಗೆ ಗುರುತಿಸಲಾಗಿದ್ದು, ಈ ಪೈಕಿ ಈವರೆಗೆ ಶೇ.33 ಮಾತ್ರ ಲಸಿಕಾಕರಣವಾಗಿದೆ. ಜಿಲ್ಲೆಯ ಈ ಪ್ರಗತಿ ಕುಂಠಿತವಾಗಿದ್ದು, ಮಕ್ಕಳಿಗೆ ರಜೆ ಘೋಷಿಸುವುದರೊಳಗೆ ಅಂದರೆ ಇನ್ನು 2 ರಿಂದ 3 ದಿನಗಳ ಒಳಗೆ ಗುರತಿಸಲಾದ ಎಲ್ಲ ಮಕ್ಕಳಿಗೆ ಲಸಿಕೆಯನ್ನು ನೀಡಬೇಕು. ರಜೆ ನೀಡಿದ್ದರೆ ಅವರನ್ನು ಕರೆಯಿಸಿ ಲಸಿಕೆ ನೀಡಬೇಕು.


ಬಿಇಓ ಗಳು ಆಯಾ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವೇಳಾಪಟ್ಟಿ ಸಿದ್ದಪಡಿಸಿಕೊಂಡು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಕ್ರಮ ವಹಿಸಬೇಕು. ದಿನಕ್ಕೆ 10 ಸಾವಿರ ಮಕ್ಕಳಿಗೆ ಲಸಿಕೆ ನೀಡಲು ಯೋಜನೆಯನ್ನು ಬಿಇಓ ಗಳು ತಯಾರಿಸಿ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡಬೇಕು. ಯಾವುದೇ ಶಾಲೆಯಲ್ಲಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಕೆಲವು ಹೈಯರ್ ಪ್ರೈಮರಿ ಶಾಲೆಗಳಲ್ಲಿ ಪರೀಕ್ಷೆ ಮುಗಿಸಿ ರಜೆ ನೀಡಲಾಗಿದೆ. ಕೆಲ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಹಾಗೂ ಕೆಲವು ವಸತಿ ಶಾಲೆಗಳಲ್ಲಿ ರಜೆ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಇದನ್ನೆಲ್ಲಾ ನೋಡಿಕೊಂಡು ಮಕ್ಕಳನ್ನು ಕರೆಯಿಸಿ ಲಸಿಕೆ ನೀಡಲು ಶಾಲಾ ಮುಖ್ಯೋಪಾಧ್ಯಾಯರು ಕ್ರಮ ಕೈಗೊಳ್ಳುವಂತೆ ಬಿಇಓ ರವರು ಸೂಚಿಸಬೇಕು ಎಂದರು.


ಲಸಿಕೆ ಕೊಡಿಸಲು ಹಿಂಜರಿಯುವಂತಹ ಪ್ರಕರಣಗಳಿದ್ದರೆ ಪೋಷಕರು ಮತ್ತು ಶಾಲೆ ಉಪಾಧ್ಯಾಯರ ಸಭೆ ಕರೆದು ಮನವೊಲಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಹಾಗೆಯೇ 15 ರಿಂದ 17 ವರ್ಷದ ವಿದ್ಯಾರ್ಥಿಗಳ ಲಸಿಕಾಕರಣ ಕೂಡ ಶೇ.100 ಆಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಆರ್‍ಸಿಹೆಚ್‍ಓ ಡಾ.ನಾಗರಾಜ ನಾಯ್ಕ್ ಕೋವಿಡ್ ಲಸಿಕಾಕರಣದ ಪ್ರಗತಿ ಮಾಹಿತಿ ನೀಡಿದರು. ಡಿಡಿಪಿಐ ರಮೇಶ್, ತಾಲ್ಲೂಕು ವೈದ್ಯಾಧಿಕಾರಿಗಳು, ಬಿಇಓ ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರತಿನಿಧಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!